ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಆಕ್ರೋಶ ತೀವ್ರಗೊಂಡಿದೆ. ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ದರ ಘೋಷಿಸಲು ಶುಕ್ರವಾರದವರೆಗೆ ಗಡುವು ನೀಡಿದ್ದರೂ ಯಾವುದೇ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ, ಶನಿವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ರೈತ ಮುಖಂಡ ಚುನಪ್ಪ ಪೂಜೇರಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಆಕ್ರೋಶ ತೀವ್ರಗೊಂಡಿದೆ. ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ದರ ಘೋಷಿಸಲು ಶುಕ್ರವಾರದವರೆಗೆ ಗಡುವು ನೀಡಿದ್ದರೂ ಯಾವುದೇ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ, ಶನಿವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ರೈತ ಮುಖಂಡ ಚುನಪ್ಪ ಪೂಜೇರಿ ಎಚ್ಚರಿಕೆ ನೀಡಿದ್ದಾರೆ.ಮೂಡಲಗಿ ತಾಲೂಕಿನ ಗುರ್ಲಾಪುರ ಹೋರಾಟದ ಸ್ಥಳದಲ್ಲಿ ಮಾತನಾಡಿದ ಅವರು, ಇದು ರೈತರ ಪಾಲಿನ ಕೊನೆಯ ಯುದ್ಧ. ಇನ್ನು ರೈತರು ಮನೆಯಲ್ಲಿ ಕುಳಿತುಕೊಳ್ಳಬಾರದು. ಪಕ್ಷಭೇದ ಮರೆತು ಎಲ್ಲರೂ ಹತ್ತರಗಿ ಟೋಲ್ ಬಳಿ ಜಮಾಯಿಸಬೇಕು. ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ಹೋರಾಟ ನಡೆಸುವ ಬದಲು ರಾಜ್ಯದ ಎಲ್ಲ ರೈತರು ಇಲ್ಲಿಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ರೈತರ ಸಂಕಷ್ಟವನ್ನು ವಿವರಿಸುವ ಸಂದರ್ಭದಲ್ಲಿ ಭಾವುಕರಾದ ಚುನಪ್ಪ ಪೂಜೇರಿ ಕಣ್ಣೀರಿಟ್ಟರು. ರೈತರ ಕಬ್ಬು ಜಮೀನಿನಲ್ಲಿಯೇ ಒಣಗುತ್ತಿದೆ. ಅನ್ನದಾತರ ನೋವನ್ನು ನೋಡಲಾಗುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಮ್ಮೆ ರೈತರ ಜಮೀನುಗಳತ್ತ ಕಣ್ಣು ಹಾಯಿಸಿ, ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಬೇಕು. ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹1,000 ಬೆಂಬಲ ಬೆಲೆ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4,500 ದರ ನೀಡುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಸಮಿತಿಯೂ ಈವರೆಗೆ ಬೆಳಗಾವಿಗೆ ಆಗಮಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಸಾವಿರಾರು ಕೋಟಿ ರು. ನಷ್ಟವಾಗುತ್ತಿದ್ದರೂ ರೈತರು ಹೋರಾಟದಿಂದ ಹಿಂದೆ ಸರಿದಿಲ್ಲ. ಸರ್ಕಾರಕ್ಕೆ ರೈತರ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ. ಹೆದ್ದಾರಿ ಬಂದ್ ಮಾಡಬಾರದು ಎಂಬುದು ಸರ್ಕಾರದ ಆಶಯವಾಗಿದ್ದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಬ್ಬಿನ ದರ ಘೋಷಣೆ ದಿನಾಂಕವನ್ನು ಸ್ಪಷ್ಟವಾಗಿ ತಿಳಿಸಲಿ. ನಿಗದಿತ ದಿನದಂದು ದರ ಪ್ರಕಟಿಸುವ ಭರವಸೆ ನೀಡಿದರೆ ಹೆದ್ದಾರಿ ಬಂದ್ ನಿರ್ಧಾರವನ್ನು ಹಿಂಪಡೆಯಲು ಸಿದ್ಧರಿದ್ದೇವೆ ಎಂದರು.ರಾಜ್ಯದ ಮಠಾಧೀಶರು ಸೇರಿದಂತೆ ಎಲ್ಲ ವರ್ಗದ ಜನರು ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು. ಪಕ್ಷಭೇದ ಮರೆತು ರೈತರ ಹಿತಕ್ಕಾಗಿ ಎಲ್ಲರೂ ಒಂದಾಗಬೇಕು. ಇದು ನಮ್ಮ ಕೊನೆಯ ಹೋರಾಟವಾಗಿದ್ದು, ಹೆದ್ದಾರಿ ಬಂದ್ನಿಂದ ಉಂಟಾಗುವ ಯಾವುದೇ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಚುನಪ್ಪ ಪೂಜೇರಿ ಎಚ್ಚರಿಕೆ ನೀಡಿದರು.
