ಕನ್ನಡಪ್ರಭ ವಾರ್ತೆ ತುಮಕೂರು
ಯಾವ ಕುಟುಂಬದಲ್ಲಿ ಮಹಿಳೆ ನೆಮ್ಮದಿಯಾಗಿ ಇರುವಳೋ ಅಂತಹ ಕುಟುಂಬಗಳು ಸಮೃದ್ಧಿ ಹೊಂದುತ್ತವೆ. ಇಂತಹ ಪ್ರೀತಿಯ ಹುಡುಕಾಟದಲ್ಲಿಯೇ ದೌರ್ಜನ್ಯ ರಹಿತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಎಸ್.ಸಿದ್ದರಾಮಣ್ಣ ಕರೆ ನೀಡಿದರು.ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ-ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
1911 ರಿಂದಲೂ ಮಹಿಳಾ ಹೋರಾಟಗಳು ನಡೆದುಕೊಂಡು ಬಂದಿವೆ. ವಿಶ್ವ ಮಹಿಳಾ ದಿನಾಚರಣೆಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಇತಿಹಾಸವನ್ನು ಅರಿಯುತ್ತಲೇ ನಮ್ಮ ಸಮಾಜವನ್ನು ಉತ್ತಮ ಸ್ಥಿತಿಯಲ್ಲಿಡಲು ನಾವೆಲ್ಲ ಶ್ರಮಿಸಬೇಕು. ಅಸಮಾನತೆ ಹಳಿಯಬೇಕು. ದೌರ್ಜನ್ಯ ರಹಿತ ಸಮಾಜ ನಿರ್ಮಾಣವಾಗಬೇಕು. ತಾರತಮ್ಯ ನಿವಾರಣೆಯಾಗಿ ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಇದಕ್ಕಾಗಿ ಇಂತಹ ಸಮಾರಂಭಗಳು ಅತ್ಯವಶ್ಯಕ ಎಂದರು.ಅಧ್ಯಕ್ಷೀಯ ನುಡಿಗಳನ್ನಾಡಿದ ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ಮಾತನಾಡಿ, ಆಧುನಿಕತೆ ಬೆಳೆದಂತೆ ದೌರ್ಜನ್ಯದ ಸ್ವರೂಪಗಳೂ ಬದಲಾಗುತ್ತಿವೆ. ಸಮಾನತೆ ಎಂಬುದು ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ದುಡಿಯುವ ಮಹಿಳೆಯರಂತೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕುಟುಂಬದ ಒಳಗೆ ಮತ್ತು ಹೊರಗೆ ಎರಡೂ ಕಡೆ ತನಗಾಗುವ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡೇ ಬದುಕು ಸಾಗಿಸುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಪ್ರೀತಿ, ಸಹನೆಯ ಮಾತುಗಳು ಮುಖ್ಯವಾಗುತ್ತವೆ. ಅಂತಹ ವಾತಾವರಣ ನಿರ್ಮಾಣವಾಗಲಿ ಎಂದು ಆಶಿಸಿದರು.
ಆಶಯ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಹೋರಾಟಗಳು ಮತ್ತು ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಪ್ರಶಸ್ತಿಗಾಗಿ ಅರ್ಹರನ್ನು ಹುಡುಕುವುದೇ ಕಷ್ಟವಾಗಿದೆ. ನಿರಂತರವಾಗಿ ಸಮಾಜಮುಖಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿದಾಗ ಆ ಪ್ರಶಸ್ತಿಗೆ ಅರ್ಥ ಬರುತ್ತದೆ. ಅಂತಹ ಕೆಲಸವನ್ನು 25 ವರ್ಷಗಳಿಂದ ವರದಕ್ಷಿಣೆ ವಿರೋಧಿ ವೇದಿಕೆ ಮುನ್ನಡೆಸಿಕೊಂಡು ಬಂದಿರುವುದು ಸ್ವಾಗತಾರ್ಹ. ಇಲ್ಲಿ ಗುರುತಿಸಲ್ಪಟ್ಟಿರುವ ಸಾಲು ಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಮೊದಲಾದವರು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯ ಜೊತೆ ಜೊತೆಗೆ ವೇದಿಕೆಯು ಸಾಂತ್ವನ ಕೇಂದ್ರದ ಮೂಲಕ ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾ ಬಂದಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಎನ್.ಇಂದಿರಮ್ಮ ಮಾತನಾಡಿ, ಜನರ ನಡುವೆ ಇದ್ದು ಕೆಲಸ ಮಾಡಿದಾಗ ಅಂತಹವರಿಗೆ ಪ್ರಶಸ್ತಿಗಳು ಬಂದಾಗ ಅತ್ಯಂತ ಖುಷಿಯಾಗುತ್ತದೆ. ಸಾಮಾಜಿಕ ಬದಲಾವಣೆ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಇದು ಸಾಮೂಹಿಕವಾಗಿ ಆಗಬೇಕಿರುವ ಕೆಲಸ. ಪ್ರಸ್ತುತ ಸನ್ನಿವೇಶದಲ್ಲಿ ನಿತ್ಯವೂ ಕೊಲ್ಲುವ ಸಂಸ್ಕೃತಿ, ದೌರ್ಜನ್ಯ, ಅತ್ಯಾಚಾರ, ವಿಕೃತ ಹಿಂಸೆಗಳನ್ನೇ ನೋಡುತ್ತಿದ್ದೇವೆ. ಇಂತಹ ವಿಕೃತಿಗಳನ್ನು ಕೊನೆಗಾಣಿಸಲು ಮಹಿಳೆಯರ ಜೊತೆ ಪುರುಷರೂ ಸೇರಿಕೊಳ್ಳಬೇಕು. ಆಗ ಮಾತ್ರ ಇಂತಹ ಅನಿಷ್ಠಗಳನ್ನು ಕೊನೆಗಾಣಿಸಲು ಸಾಧ್ಯ ಎಂದರು.
ಡಾ.ಜಿ.ಪರಮೇಶ್ವರ್ ಸ್ಥಾಪಿತ ಗಂಗಮಾಳಮ್ಮ ಗಂಗಾಧರಯ್ಯ ನೆನಪಿನ ಮಹಿಳಾ ಚೇತನ ಪ್ರಶಸ್ತಿಯನ್ನು ಕೊರಟಗೆರೆ ತಾಲೂಕು ಹೊಸಹಳ್ಳಿಯ ಶ್ರೀದೇವಿ, ದಿ. ಚೆನ್ನಿಗಪ್ಪ ಅವರು ಸ್ಥಾಪಿಸಿರುವ ಚನ್ನಮ್ಮ ಚನ್ನರಾಯಪ್ಪ ನೆನಪಿನ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಚಿಕ್ಕನಾಯಕನಹಳ್ಳಿಯ ಎನ್.ಇಂದಿರಮ್ಮ ಅವರಿಗೆ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಅವರು ಪತ್ನಿ ಸರೋಜಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಶ್ರಮಜ್ಯೋತಿ ಪ್ರಶಸ್ತಿಯನ್ನು ತುಮಕೂರಿನ ಟಿ.ಸಿ.ಪ್ರೇಮಲತಾ ಅವರಿಗೆ ಪ್ರದಾನ ಮಾಡಲಾಯಿತು. ತಲಾ 5ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನವನ್ನು ಇದು ಒಳಗೊಂಡಿದೆ. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಅನಂತರಾಮಯ್ಯ, ಖಜಾಂಚಿ ನರಸಿಂಹರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.ಎನ್.ಅಕ್ಕಮ್ಮ, ಪಾರ್ವತಮ್ಮ, ಗಂಗಲಕ್ಷ್ಮೀ ತಂಡದವರು ಮಹಿಳಾ ಜಾಗೃತಿ ಗೀತೆಗಳನ್ನು ಹಾಡಿದರು. ಮಮತ ರವಿಕುಮಾರ್ ಸ್ವಾಗತಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪುಟ್ಟನರಸಯ್ಯ ವಂದಿಸಿದರು.
