ಸಾರಾಂಶ
ಹಾಸನ: ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ಅಗತ್ಯ ಪ್ರಮಾಣದ ನೇಮಕಾತಿ ಆಗಬೇಕು ಮತ್ತು ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್‌ನ ಉಪ ಪ್ರಧಾನ ಕಾರ್ಯದರ್ಶಿ ಕಾಂ. ಕೆ.ಜಿ. ಪಣೀಂದ್ರ ಕರೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್ ಮತ್ತು ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಬ್ಯಾಂಕ್ ನೌಕರರ ಸಂಘಟನೆಯಾಗಿದೆ. ಕಳೆದ ೭೭ ವರ್ಷಗಳಿಂದ ಬ್ಯಾಂಕ್ ಉದ್ಯೋಗಿಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಎಂದರು.ಆದರೆ ಇಂದು ಬ್ಯಾಂಕುಗಳ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬ್ಯಾಂಕಿಂಗ್ ಸೌಲಭ್ಯವು ಈ ದೇಶದ ಮೂಲೆ ಮೂಲೆಗೂ ತಲುಪಬೇಕು ಮತ್ತು ಗ್ರಾಹಕರಿಗೆ ಅತ್ಯುತ್ಕೃಷ್ಟ ಸೇವೆಯೂ ಸಿಗಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಅಗತ್ಯ ಪ್ರಮಾಣದ ನೇಮಕಾತಿ ಆಗಬೇಕು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಹೋರಾಟಕ್ಕೆ ಸಿದ್ಧವಾಗಿದೆ ಎಂದರು.ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಕುಮಾರ್ ಮಾತನಾಡಿ, ಬ್ಯಾಂಕುಗಳಲ್ಲಿ ಖಾಲಿ ಇರುವ ೨ ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಲು ಒತ್ತಾಯಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಒತ್ತಾಯಿಸಿ ಮತ್ತು ಹೊರಗುತ್ತಿಗೆ ಪದ್ಧತಿಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇತಿಹಾಸದಲ್ಲೇ ಪ್ರಪ್ರಥಮವಾಗಿ ೪ ತಿಂಗಳುಗಳ ಕಾಲದ ಸುದೀರ್ಘವಾದ ಹೋರಾಟದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಜಿ.ಟಿ. ಲೋಕೇಶ್ ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಿದ್ದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಇಂದು ಬ್ಯಾಂಕುಗಳ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ಸರಕಾರದ ರಾಷ್ಟ್ರೀಕರಣ ವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಎಐಬಿಇಎ ಯ ಈ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಾರ್ವಜನಿಕರೂ ಬೆಂಬಲ ಕೊಡಬೇಕು ಎಂದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀಧರ್, ಭಾಸ್ಕರ್, ನಾಗೇಂದ್ರಪ್ರಸಾದ್, ಗುರುಮೂರ್ತಿ, ಲಕ್ಷ್ಮೀನಾರಾಯಣ, ಕೋಮಲ್, ಮಂಜುನಾಥ್ ಇತರರು ಭಾಗವಹಿಸಿದ್ದರು.-ಉಗ್ರ ಹೋರಾಟದ ಎಚ್ಚರಿಕೆಬ್ಯಾಡ್ಜ್ ಧರಿಸುವುದು, ಟ್ವಿಟರ್ ಅಭಿಯಾನ, ಜಿಲ್ಲಾವಾರು ಸದಸ್ಯರ ಸಭೆ, ಸರಕಾರಕ್ಕೆ ಮನವಿ ಸಲ್ಲಿಸುವುದು, ಬ್ಯಾಂಕ್‌ವಾರು ಮುಷ್ಕರ, ರಾಜ್ಯವಾರು ಮುಷ್ಕರ, ಅಖಿಲ ಭಾರತ ಬ್ಯಾಂಕ್ ಮುಷ್ಕರ ಮೊದಲಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಸರಕಾರವು ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಕಾಂ. ಕೆ.ಜಿ. ಪಣೀಂದ್ರಹೇಳಿದರು.