ಸಾರಾಂಶ
ಬ್ಯಾಡಗಿ: ಸದೃಢ ಆರೋಗ್ಯ ಉಳಿಸಿಕೊಂಡು ಸುಖಿ ಜೀವನ ನಡೆಸಲು ಚಟಗಳಿಂದ ಮುಕ್ತವಾಗಿ ಉತ್ತಮ ಆಹಾರ ಸೇವನೆ ರೂಢಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ತಿಳಿಸಿದರು. ಪುರಸಭೆ ಹಾಗೂ ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನ ಸೆ.೧೭ರಿಂದ ಅ.೨ ರ ವರೆಗೆ ಸಫಾಯಿ ಮಿತ್ರ ಸುರಕ್ಷಾ ಕಾರ್ಯಕ್ರಮ ಹಾಗೂ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಪುರಸಭೆ ಕಾರ್ಮಿಕರ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪೌರಕಾರ್ಮಿಕರು ಮಳೆ-ಚಳಿ ಎನ್ನದೆ ಬೆಳಗಾಗುತ್ತಿದ್ದಂತೆ ಸ್ವಚ್ಛತೆ ಕಾರ್ಯಗಳಿಗೆ ತೆರಳಬೇಕಿದೆ. ಕೆಲವೊಮ್ಮೆ ಅನಿವಾರ್ಯವಾಗಿ ವಿವಿಧ ರೋಗರುಜಿನಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಗುರ್ತಿಸಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡುವ ಮೂಲಕ ಚಿಕಿತ್ಸೆಗಳ ವೆಚ್ಚ ನೀಡಲಾಗುತ್ತಿದೆ. ಕಾರ್ಮಿಕರು ತಮ್ಮ ಮನೆ ಸೇರಿದಂತೆ ಸುತ್ತಲಿನ ಸ್ವಚ್ಛತೆಯೊಂದಿಗೆತಮ್ಮಆರೋಗ್ಯದ ಕಡೆ ವಿಶೇಷ ಗಮನಹರಿಸಬೇಕು. ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ರೋಗ ತಡೆಗಟ್ಟುವಲ್ಲಿ ಮುಂಜಾಗೃತವಾಗಿ ಸುರಕ್ಷಾ ಕವಚಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ವಿತರಿಸಲಾಗಿದೆ. ಪೌರಕಾರ್ಮಿಕರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಚಿಕಿತ್ಸೆ ಪಡೆದುಆರೋಗ್ಯದ ಕಾಳಜಿ ಮಾಡಿಕೊಳ್ಳಬೇಕಿದೆ.ಈ ಕುರಿತು ಆರೋಗ್ಯ ಜಾಗೃತಿ ಕೂಡ ನಡೆಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಸ್ವಾಸ್ಥ ಸಮಾಜ ನಿರ್ಮಿಸಬೇಕಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಮಾತನಾಡಿ, ಬಹುತೇಕ ಯುವಕ ಯುವತಿಯರು ದುಶ್ವಟಗಳಿಗೆ ಒಳಗಾಗಿ ಭವಿಷ್ಯವನ್ನು ಕತ್ತಲಾಗಿಸಿಕೊಳ್ಳುವ ಮೂಲಕ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದು, ಗುರು ಹಿರಿಯರ ಮಾತಿಗೆ ಮನ್ನಣೆ ನೀಡದಂತಾಗಿದೆ. ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಲಾಗುತ್ತಿದೆ.“ವ್ಯಸನ ಮುಕ್ತ” ಸಮಾಜ ನಿರ್ಮಿಸುವ ಗುರಿ ನಮ್ಮ ಮೇಲಿದೆ. ಆರೋಗ್ಯಯುತ ಸಮಾಜ ನಿರ್ಮಿಸಿದಾಗ ಸಂಪೂರ್ಣ ವ್ಯವಸ್ಥೆ ಸುಸೂತ್ರವಾಗಿ ನಡೆಯಲಿದೆ. ಯುವಪೀಳಿಗೆ ಮೊಬೈಲ್, ಸಿನೆಮಾ ಹಾಗೂ ವಿವಿಧ ದೃಶ್ಯಗಳಿಗೆ ಜೋತು ಬಿದ್ದು ತಮ್ಮಜೀವನ ಹಾಳು ಮಾಡಿಕೊಳ್ಳುತ್ತಿರುವುದು ಖೇದನೀಯ. ಆಧುನಿಕ ವ್ಯವಸ್ಥೆಯಲ್ಲಿ ಹವ್ಯಾಸಗಳನ್ನು ಮೋಜಿನರೂಪದಲ್ಲಿ ರೂಢಿಸಿಕೊಂಡು ಕೊನೆಗೂ ಹಲವು ರೋಗಗಳಿಗೆ ತುತ್ತಾಗಿ ಪ್ರಾಣ ಹಾನಿ ಮಾಡಿಕೊಳ್ಳುತ್ತಿರುವುದು ನಡೆದಿದೆ. ಪಾಲಕರು ತಮ್ಮ ಮನೆಗಳಲ್ಲಿ ತಮ್ಮಆರೋಗ್ಯದ ಜೊತೆ ಮಕ್ಕಳ ಭವಿಷ್ಯ, ಆರೋಗ್ಯಕ್ಕೂ ವಿಶೇಷ ಒತ್ತು ನೀಡಬೇಕಿದೆ.ಆರೋಗ್ಯ ತಪಾಸಣೆ ಸಿಬ್ಬಂದಿಗಳು ರಕ್ತಒತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳಿಗೆ ಸಂಬಂಧಿಸಿದಂತೆ ೧೧೦ಜನ ಪೌರಕಾರ್ಮಿಕರ ತಪಾಸಣೆ ನಡೆಸಿದರು. ಆರೋಗ್ಯ ತೊಂದರೆಯಿರುವ ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ನಾಗರತ್ನ ಹೊಸಮನಿ, ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಆಶ್ರಯ ಸಮಿತಿ ಸದಸ್ಯ ಗಿರೀಶ ಇಂಡಿಮಠ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗೋಕುಲ ವಿ., ಅಮೂಲ್ಯ ಆರ್ಥಿಕ ಸಲಹೆಗಾರ ಶಂಕರ ಉಪ್ಪಾರ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ. ಹನುಮಂತಪ್ಪ, ಸದಾನಂದ ಚಿಕ್ಕಮಠ, ಪುರಸಭೆ ಪರಿಸರ ಅಭಿಯಂತರ ಚನ್ನಪ್ಪ ಅಂಗಡಿ, ಮಹಾಂತೇಶ ಹಳ್ಳಿ ಇದ್ದರು.