ಹಾರೋಹಳ್ಳಿ: ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ವಿಕಸಿತ ಭಾರತ ರೋಜ್ಗಾರ್ ಮತ್ತು ಆಜೀವಕ್ ಮಿಷನ್ (ಗ್ರಾಮೀಣ ವಿಬಿ ಜಿ ರಾಮ್‌ ಜಿ) ಯೋಜನೆಯನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾಮಾಜಿಕ ಲೆಕ್ಕ ಪರಿಶೋಧನೆ ಜಿಲ್ಲಾ ಸಂಯೋಜಕ ಶ್ರೀನಿವಾಸ್‌ ಮೂರ್ತಿ ತಿಳಿಸಿದರು

ಹಾರೋಹಳ್ಳಿ: ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ವಿಕಸಿತ ಭಾರತ ರೋಜ್ಗಾರ್ ಮತ್ತು ಆಜೀವಕ್ ಮಿಷನ್ (ಗ್ರಾಮೀಣ ವಿಬಿ ಜಿ ರಾಮ್‌ ಜಿ) ಯೋಜನೆಯನ್ನು ಜಾರಿಗೆ ತಂದಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾಮಾಜಿಕ ಲೆಕ್ಕ ಪರಿಶೋಧನೆ ಜಿಲ್ಲಾ ಸಂಯೋಜಕ ಶ್ರೀನಿವಾಸ್‌ ಮೂರ್ತಿ ತಿಳಿಸಿದರು.

ತಾಲೂಕಿನ ಕೊಟ್ಟಗಾಳು ಗ್ರಾಪಂ ಆವರಣದಲ್ಲಿ ನಡೆದ 2025-26ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆಯಾಗಿದ್ದು, ಇದರ ಕಾರ್ಯವೈಖರಿಯನ್ನು ಜನರ ಅನುಕೂಲಕ್ಕಾಗಿ ವಿಸ್ತರಿಸಲಾಗಿದೆ ಎಂದರು.

ಯೋಜನೆಯಡಿ ಗ್ರಾಮೀಣರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಿವಿಧ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಉದ್ಯೋಗಕ್ಕಾಗಿ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಗ್ರಾಮದಲ್ಲಿಯೇ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಕಲ್ಪಿಸುವುದು ನರೇಗಾ ಯೋಜನೆಯ ಪ್ರಮುಖ ಉದ್ದೇಶ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ರೈತರು ಸರ್ಕಾರದ ವಿವಿಧ ಕೃಷಿ ಆಧಾರಿತ ಯೋಜನೆಗಳು ಹಾಗೂ ಪ್ರೋತ್ಸಾಹಧನಗಳನ್ನು ಪಡೆದುಕೊಂಡು ಸುಸ್ಥಿರ ಕೃಷಿಯತ್ತ ಗಮನಹರಿಸಬೇಕು, ಗ್ರಾಮೀಣ ಜನರಿಗೆ ಸರ್ಕಾರ ನೀಡುತ್ತಿರುವ ಪ್ರತಿಯೊಂದು ಸೌಲಭ್ಯವೂ ಸಾರ್ವಜನಿಕರ ತೆರಿಗೆ ಹಣದಿಂದಲೇ ಜಾರಿಯಾಗುತ್ತಿದ್ದು, ಅರ್ಹ ಫಲಾನುಭವಿಗಳು ಯಾವುದೇ ಹಿಂಜರಿಕೆಯಿಲ್ಲದೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಸಂಯೋಜಕಿ ಕಮಲಮ್ಮ ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಮಾತ್ರವಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಅಗತ್ಯವಿರುವ ಹಲವು ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳುವುದರ ಜೊತೆಗೆ, ನೀರಿನ ಸಂರಕ್ಷಣೆ, ಭೂ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದು ಶ್ರೀನಿವಾಸ್ ಮೂರ್ತಿ ತಿಳಿಸಿದರು.

ರೇಷ್ಮೆ ಇಲಾಖೆಯ ಪ್ರಕಾಶ್ ಮಾತನಾಡಿ, ರೇಷ್ಮೆ ಕೃಷಿ ಕೈಗೊಳ್ಳಲು ಆಸಕ್ತಿ ಹೊಂದಿರುವ ರೈತರಿಗೆ ಇಲಾಖೆಯಿಂದ ಅಗತ್ಯ ಮಾರ್ಗದರ್ಶನ ಹಾಗೂ ಯೋಜನೆಗಳ ಮಾಹಿತಿ ನೀಡಲಾಗುತ್ತಿದ್ದು, ರೈತರು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಜಮೀನಿನ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ನೊಡೆಲ್ ಅಧಿಕಾರಿ ಪಾಟೀಲ್ ಪಿಡಿಒ ಭಾಗೀರತಿ, ಎಸ್ ಡಿಎ ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಿಕಿ ಜಯಲಕ್ಷ್ಮಿ, ಹಿಂದುಳಿದ ವರ್ಗಗಳ ಇಲಾಖೆ ಸಿದ್ದಲಿಂಗಪ್ಪ, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಭಾಗವಹಿಸಿದ್ದರು.

30ಕೆಆರ್ ಎಂಎನ್ 6.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಪಂ ಆವರಣದಲ್ಲಿ ನಡೆದ 2025-26ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ ನಡೆಯಿತು.