ಬಾಳೆಹೊನ್ನೂರುಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ (ಸಿಸಿಆರ್‌ಐ) ಡಿ.20ರಿಂದ 22ರವರೆಗೆ ನಡೆಯಲಿರುವ ಸಂಸ್ಥೆ ಶತಮಾನೋತ್ಸವ ಕಾರ್ಯಕ್ರಮವನ್ನು ಕಾಫಿ ಬೆಳೆಗಾರರು, ಉದ್ಯಮಿಗಳು, ಸಾರ್ವಜನಿಕರು ಹಾಗೂ ಕಾಫಿ ಪ್ರಿಯರು, ಬೆಳೆಯ ಅವಲಂಬಿತರು ಯಶಸ್ವಿಗೊಳಿಸುವಂತೆ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಂ.ಸೆಂಥಿಲ್ ಕುಮಾರ್ ಕರೆ ನೀಡಿದ್ದಾರೆ.
ಸಂಭ್ರಮಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ, ಗೋಷ್ಠಿ, ಪ್ರಾತ್ಯಕ್ಷಿಕೆ । 30 ಸಾವಿರ ಬೆಳೆಗಾರರು ಭಾಗಿ ನಿರೀಕ್ಷೆ: ಡಾ. ಎಂ.ಸೆಂಥಿಲ್‌ಕುಮಾರ್ ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ (ಸಿಸಿಆರ್‌ಐ) ಡಿ.20ರಿಂದ 22ರವರೆಗೆ ನಡೆಯಲಿರುವ ಸಂಸ್ಥೆ ಶತಮಾನೋತ್ಸವ ಕಾರ್ಯಕ್ರಮವನ್ನು ಕಾಫಿ ಬೆಳೆಗಾರರು, ಉದ್ಯಮಿಗಳು, ಸಾರ್ವಜನಿಕರು ಹಾಗೂ ಕಾಫಿ ಪ್ರಿಯರು, ಬೆಳೆಯ ಅವಲಂಬಿತರು ಯಶಸ್ವಿಗೊಳಿಸುವಂತೆ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಂ.ಸೆಂಥಿಲ್ ಕುಮಾರ್ ಕರೆ ನೀಡಿದ್ದಾರೆ.1925ರಲ್ಲಿ ಮೊದಲ ಬಾರಿಗೆ ಕಾಫಿ ಬೆಳೆಯಲ್ಲಿ ಕಂಡುಬಂದಿದ್ದ ತುಕ್ಕು ರೋಗ ತಡೆಗಟ್ಟಲು ಆರಂಭಿಸಿದ ಸಂಸ್ಥೆ ಕಾಫಿ ಉದ್ಯಮ, ಬೆಳೆಗಾರರಿಗಾಗಿ ನಿರಂತರ ಸೇವೆ ಸಲ್ಲಿಸುತ್ತ ಬಂದಿದೆ. ಪ್ರಸ್ತುತ ಸಂಸ್ಥೆಗೆ 100 ವರ್ಷ ತುಂಬಿದ್ದು, ಇದು ಕೇವಲ ಲೆಕ್ಕ ಮಾತ್ರ ವಲ್ಲ. ಸಂಸ್ಥೆ ಬೆಳವಣಿಗೆಯನ್ನು ಹಿಂದಿರುಗಿ ನೋಡಿದರೆ ಹಲವು ಮೈಲುಗಲ್ಲು ನೋಡಬಹುದು ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮೊದಲಿಗೆ ಮೈಸೂರು ಕಾಫಿ ಎಕ್ಸಪರಿಮೆಂಟ್ ಸ್ಟೇಷನ್ ಹೆಸರಿನಲ್ಲಿ ಆರಂಭಗೊಂಡಿದ್ದು, ಮೈಸೂರು ಸಂಸ್ಥಾನದ ಕೃಷಿ ನಿರ್ದೇಶಕ ಡಾ. ಎಲ್.ಸಿ.ಕೊಲ್‌ಮನ್ ರಿಂದ ಲೋಕಾರ್ಪಣೆಗೊಂಡು, ಅವರೇ ಪ್ರಥಮ ನಿರ್ದೇಶಕರಾಗಿದ್ದರು. 1946ರಲ್ಲಿ ಕಾಫಿ ಮಂಡಳಿ ಎಂದು ಮರು ನಾಮಕರಣಗೊಂಡು ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರವಾಗಿ ಮುಂದುವರಿಯಿತು. ಬಳಿಕ ಈ ಸಂಸ್ಥೆಯಲ್ಲಿ ಕಾಫಿ ಸಂಶೋಧನೆಗಾಗಿ ವಿವಿಧ ವಿಭಾಗಗಳನ್ನು ಆರಂಭಿಸಲಾಯಿತು.ಪ್ರಸ್ತುತ 3.63 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಕಾಫಿ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದ್ದು, ರಫ್ತಿನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಸಂಸ್ಥೆ ಲೋಕಾರ್ಪಣೆಗೊಂಡ ನಂತರ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಕಾಫಿ ಸಂಶೋಧನಾ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ. ತಮಿಳುನಾಡು, ಆಂದ್ರಪ್ರದೇಶ, ಅಸ್ಸಾಂ ಮುಂತಾದ ಕಡೆಗಳಲ್ಲಿ ಕೇಂದ್ರಗಳಿದ್ದು ಅಲ್ಲಿನ ಕಾಫಿ ಬೆಳೆ ಕುರಿತು ಸಂಶೋಧನೆ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧೆಡೆಗಳಲ್ಲಿ ವಿಸ್ತರಣಾ ವಿಭಾಗಗಳನ್ನು ಸಹ ಆರಂಭಿಸಲಾಗಿದೆ. ಬೇರೆ ಯಾವುದೇ ಸಂಸ್ಥೆಗಳಿಗಿಂತ ಬಲಯುತವಾದ ಜಾಲಬಂಧವನ್ನು ಕಾಫಿ ಮಂಡಳಿ ಹೊಂದಿದೆ. ದೇಶಾದ್ಯಂತ 16 ತಾಂತ್ರಿಕ ಅಭಿವೃದ್ಧಿ ಕೇಂದ್ರಗಳನ್ನು ಸಹ ಸಂಸ್ಥೆ ಹೊಂದಿದೆ.ದೇಶಾದ್ಯಂತ 4 ಲಕ್ಷ ಕಾಫಿ ಬೆಳೆಗಾರರಿದ್ದು, 10 ಲಕ್ಷ ಕುಟುಂಬಗಳು ಕಾಫಿ ಅವಲಂಭಿತವಾಗಿ ಜೀವನ ನಡೆಸುತ್ತಿವೆ. ನಮ್ಮಲ್ಲಿ ಉತ್ಪಾದನೆಯಾಗುವ ಶೇ.೮೦ರಷ್ಟು ಕಾಫಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಪ್ತು ಮಾಡಲಾಗುತ್ತಿದೆ. 7 ಚಿನ್ನದ ಕಾಫಿ ಬೀಜಗಳಿಂದ ಆರಂಭಗೊಂಡ ಭಾರತದ ಕಾಫಿಯನ್ನು 7 ಲಕ್ಷ ಟನ್‌ಗೆ ತಲುಪಿಸಬೇಕು ಎಂಬುದು ನಮ್ಮ ಗುರಿ. ಕಾಫಿ ಉದ್ಯಮಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಸಂಶೋಧನಾ ಕೇಂದ್ರ 100 ವರ್ಷ ತುಂಬಿರುವುದು ಕೇವಲ ಲೆಕ್ಕ ಮಾತ್ರವಲ್ಲ. ಇದು ಭಾರತೀಯರೆಲ್ಲರ ಕನಸು ನನಸಾಗಿ ಕೈಗೆ ಬಂದಿರುವ ದಿನವಾಗಿದೆ. ಇದನ್ನು ನಾವು ಕೇವಲ ಆಚರಣೆಗೆ ಸೀಮಿತ ಮಾಡುತ್ತಿಲ್ಲ. ಪ್ರತಿಯೊಬ್ಬರೂ ಜಾತ್ರೆಯಂತೆ ಸಂಭ್ರಮಿಸಬೇಕಿದೆ.ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ವಿವಿಐಪಿಗಳನ್ನು ಹೊರತುಪಡಿಸಿ ಆಗಮಿಸುವ ಎಲ್ಲಾ ಬೆಳೆಗಾರರು, ಸಾರ್ವಜನಿಕರ ವಾಹನಗಳಿಗೆ ಬಾಳೆಹೊನ್ನೂರು-ಶೃಂಗೇರಿ ರಸ್ತೆಯ ಸೀಗೋಡು ಬಳಿ ಕ್ರೀಡಾಂಗಣ ಹಾಗೂ ಜವಾಹರ ನವೋದಯ ವಿದ್ಯಾಲಯದ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೀಗೋಡಿನಿಂದ ಸಂಶೋಧನಾ ಕೇಂದ್ರಕ್ಕೆ 15ಕ್ಕೂ ಹೆಚ್ಚು ವಾಹನಗಳನ್ನು ನಿಗದಿಗೊಳಿಸಿ ಕಾರ್ಯಕ್ರಮಕ್ಕೆ ಕರೆತಂದು ವಾಪಾಸ್ ಬಿಡಲು ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳಿಗೆ ಸಿಆರ್‌ಎಸ್‌ನ ಬಿಸಿವಿ ಶಾಲೆಯ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರೂ ಸಹಕಾರ ಅತ್ಯಗತ್ಯ. ಇದನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿಸಬೇಕು ಎಂದು ಕೋರಿದರು.ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಸಿ.ಬಾಬು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
--ಬಾಕ್ಸ್--ಶತಮಾನೋತ್ಸವ ಸಂಭ್ರಮಕ್ಕೆ 3ದಿನದ ಕಾರ್ಯಕ್ರಮಶತಮಾನೋತ್ಸವದ ಅಂಗವಾಗಿ ಡಿ.20ರಿಂದ 22ರವರೆಗೆ ನಡೆಯಲಿದ್ದು, 3 ದಿನಗಳೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾಫಿ ಉದ್ಯಮ್ಯಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ವಿವಿಧ ಯಂತ್ರೋಪಕರಣಗಳನ್ನು ಪ್ರದರ್ಶನ ಮಾಡಲಾಗುವುದು.ಮೂರು ದಿನಗಳ ಕಾಲ 10ಕ್ಕೂ ಅಧಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀ ಯ, ಅಂತಾರಾಷ್ಟ್ರೀ ಯ ಮಟ್ಟದ ಹಲವಾರು ವಿಜ್ಞಾನಿಗಳು, ನುರಿತ ಬೆಳೆಗಾರರು, ಸಂಶೋಧಕರು ಆಗಮಿಸಿ ಬೆಳೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಪ್ರಲ್ಹಾದ್ ಜೋಷಿ, ರಾಜ್ಯದ ವಿವಿಧ ಸಚಿವರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಂಸ್ಥೆ ಏಳ್ಗೆಗಾಗಿ ದುಡಿದ ವಿಜ್ಞಾನಿಗಳು, ನೌಕರರು, ಪ್ರಗತಿಪರ ಬೆಳೆಗಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಎರಡು ವಿಶೇಷ ಕಾಫಿ ತಳಿಗಳನ್ನು, 8 ಹೊಸ ತಂತ್ರ ಜ್ಞಾನಗಳನ್ನು, ಸುಸ್ಥಿತ ಕಾಫಿ ಅಭಿವೃದ್ಧಿ ಕೋಡ್ ಅನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು.ಸಮಾರಂಭದಲ್ಲಿ 30 ಸಾವಿರಕ್ಕೂ ಅಧಿಕ ಬೆಳೆಗಾರರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಸಮಾರಂಭದಲ್ಲಿ ಭಾಗವಹಿಸುವವರ ನೋಂದಣಿ ಈಗಾಗಲೇ ವೆಬ್‌ಸೈಟ್ ಮೂಲಕ ಆರಂಭಿಸಲಾಗಿದೆ. ವಿಶೇಷ ಫುಡ್ ಕೋರ್ಟ್ ವ್ಯವಸ್ಥೆ ಸಹ ಇರಲಿದ್ದು, ಈಗಾಗಲೇ ಸಮಾರಂಭಕ್ಕೆ ಸಿದ್ಧತೆಗಳನ್ನು ಭರದಿಂದ ಮಾಡಲಾಗುತ್ತಿದೆ. ೧೩ಬಿಹೆಚ್‌ಆರ್ ೧:
ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಡಿ.20ರಿಂದ 22ವರೆಗೆ ನಡೆಯಲಿರುವ ಶತಮಾನೋತ್ಸವ ಸಮಾರಂಭದ ಮಾಹಿತಿಗಳ ಪುಸ್ತಕಗಳನ್ನು ಸಂಶೋಧನಾ ನಿರ್ದೇಶಕ ಡಾ. ಎಂ.ಸೆಂಥಿಲ್‌ಕುಮಾರ್ ಬಿಡುಗಡೆಗೊಳಿಸಿದರು. ಜಂಟಿ ನಿರ್ದೇಶಕ ಡಾ. ಸಿ.ಬಾಬು ಇದ್ದರು.೧೩ಬಿಹೆಚ್‌ಆರ್ ೨: ಶತಮಾನೋತ್ಸವ ಸಮಾರಂಭದ ಲಾಂಛನ.