ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಆದಿವಾಸಿ ಸಮುದಾಯದ ಪರಿಸ್ಥಿತಿ ಸುಧಾರಣೆಯಾಗಬೇಕು. ಸಂವಿಧಾನ ನೀಡಿರುವ ಹಕ್ಕನ್ನು ಸಮುದಾಯ ಪಡೆಯಲೇಬೇಕು ಎಂಬುದು ಹೋರಾಟದ ಗುರಿಯಾಗಬೇಕು. ರಾಜ್ಯದ ಆದಿವಾಸಿಗಳ ಸಮಸ್ಯೆ ನಿವಾರಣೆಗೆ ದೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗಬೇಕು ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ವಕೀಲ ಕ್ಲಿಫ್ಟನ್ ಡಿ ರೊಸಾರಿಯೊ ಕರೆ ನೀಡಿದರು.ನಗರದ ಜೆಎಲ್ ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಆದಿವಾಸಿ ಸಂಘರ್ಷ ಮೋರ್ಚಾವು ಜಾಗತಿಕ ಮೂಲ ನಿವಾಸಿ ದಿನಾಚರಣೆ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಆದಿವಾಸಿ ದಿನಾಚರಣೆ ಮೂಲಕ ತಮ್ಮ ಹಕ್ಕನ್ನು ಪಡೆದೇ ತೀರುತ್ತೇವೆ ಎಂಬ ಘೋಷಣೆ ಮಾಡಬೇಕು ಎಂದರು.
ದಲಿತರ ಹಕ್ಕುಗಳ ಬಗ್ಗೆ, ಹಿಂದುಳಿದವರ ಸಮಸ್ಯೆ ಬಗ್ಗೆ ಚರ್ಚಿಸುವವರು ಆದಿವಾಸಿಗಳನ್ನು ಏಕೆ ಮರೆಯುತ್ತಿದ್ದಾರೆ? ಇಂದಿಗೂ ಆದಿವಾಸಿಗಳು ವಸತಿ ಮತ್ತು ಮೂಲಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳು ಧಕ್ಕೆಗೊಳಗಾಗಿವೆ. ಅರಣ್ಯ ಹಕ್ಕು ಕಾಯ್ದೆಗಳು ಸೂಕ್ತವಾಗಿ ಜಾರಿಯಾಗದ ಕಾರಣ ಯಾವುದೇ ಸೌಕರ್ಯವಿಲ್ಲದೆ ಕಾಡಿನಿಂದ ಹೊರಬಿದ್ದಿದ್ದಾರೆ ಎಂದರು.270 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲಿಗರು ಆದಿವಾಸಿಗಳು. ಜಮೀನ್ದಾರರ ವಿರುದ್ಧ ಹಾಗೂ ರಾಜರ ವಿರುದ್ಧವು ಹೋರಾಟ ಮಾಡಿದವರು. ಇಂದಿಗೂ ಅವರ ಹೋರಾಟದ ಬದುಕು ಬದಲಾಗಿಲ್ಲ. ಸ್ವತಂತ್ರ ಭಾರತದಲ್ಲಿ ಅವಕಾಶ ವಂಚಿತರಾಗಿಯೇ ಬದುಕುತ್ತಿದ್ದಾರೆ. ಸಮುದಾಯದಲ್ಲಿ ಒಬ್ಬರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿಲ್ಲ. ಇದಕ್ಕೆ ಕಾರಣವೇನು ಎಂದು ಹುಡುಕುವ ಪ್ರಯತ್ನವನ್ನು ಜನಪ್ರತಿನಿಧಿಗಳೂ ಮಾಡುತ್ತಿಲ್ಲ ಎಂದರು.
ಕೊಡಗಿನ ಪಣಿ ಎರುವ ಸಮುದಾಯದ ಸವಿತಾ ಮಾತನಾಡಿ, ಸಣ್ಣ ಸಣ್ಣ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ದಿನಗೂಲಿಗೆ ತೆರಳುವ ನಮ್ಮ ಸಮುದಾಯದ ಮನೆಗಳ ಸಮೀಪದಲ್ಲಿಯೇ ಪ್ರಾಥಮಿಕ ಶಿಕ್ಷಣ ಒದಗಿಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.ಕೆಬ್ಬೇಪುರಹಾಡಿಯ ಸೀರಂ ಪಾರ್ವತಿ ಮಾತನಾಡಿ, ರಸ್ತೆ, ಸಾರಿಗೆ, ವಸತಿ ಮುಂತಾದ ಮೂಲಸೌಕರ್ಯಗಳ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಸಾಕಷ್ಟು ಜನರಿಗೆ ಅಗತ್ಯ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಪರಿಶೀಲಿಸಬೇಕು. ಕನಿಷ್ಠ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೊಡಗಿನ ಆದಿವಾಸಿಯ ಸಂಘಟನೆಯ ಗೌರಿ, ಮೋಹನ್, ತೋಲಾ, ಬೋಳ್ಕಾ, ಹಕ್ಕಿಪಿಕ್ಕಿ ಸಮುದಾಯದ ಸಮಿತ್ ಕುಮಾರ್, ಕೆಂಪಯ್ಯ, ಹರಪನಹಳ್ಳಿಯ ಪ್ರಸಾದ್ ಮೊದಲಾದವರು ಇದ್ದರು.