ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಅವಕಾಶ ಸೃಷ್ಟಿಯಾಗಬೇಕು.

ಕಾರವಾರ: ಕೇಂದ್ರ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಜನಗಣತಿಯನ್ನು ಬೆಂಬಲಿಸಲು ಭಾನುವಾರ ಇಲ್ಲಿನ ಶೇಜವಾಡ ಸದಾನಂದ ಪ್ಯಾಲೇಸ್‌ನಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ನಡೆದ ಜಾತಿ ಜನಗಣತಿ ಹಿನ್ನೋಟ- ಮುನ್ನೋಟ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

ವಿಚಾರಗೋಷ್ಠಿಯನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಡೆಸಿದ ಜಾತಿಗಣತಿಯ ಅವಾಂತರಗಳ ಬಗ್ಗೆ ವಿವರಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಜಾತಿಗಣತಿ ನಡೆಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಅವಕಾಶ ಸೃಷ್ಟಿಯಾಗಬೇಕು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು. ನಾವೆಲ್ಲ ಒಟ್ಟಾಗಿ ಇರಬೇಕು. ಜಾತಿಜನಗಣತಿಯನ್ನು ಸ್ವಾಗತಿಸೋಣ ಎಂದರು.

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜಕೀಯ ಉದ್ದೇಶಕ್ಕಾಗಿಯೇ ರಾಜ್ಯ ಸರ್ಕಾರ ಜಾತಿಗಣತಿಗೆ ಮುಂದಾಗಿದೆ. ಕೇಂದ್ರದ ಜಾತಿ ಜನಗಣತಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜಗಳು ಮುಂದೆ ಬರಲು ಪೂರಕವಾಗಿದೆ ಎಂದರು.

ದೇಶ ಪ್ರಗತಿಯ ಪಥದಲ್ಲಿದೆ. ಅಗತ್ಯ ಬಿದ್ದರೆ ಸುದರ್ಶನ ಚಕ್ರ ಹಿಡಿದು ದೇಶ ಮುನ್ನಡೆಸೋಣ. ದೇಶ ಕಟ್ಟಲು ಮುಂದಾಗೋಣ. ಹಿಂದೆ ನಾವು ಜಗತ್ತಿಗೆ ಗುರುವಾಗಿದ್ದೆವು. ನಂತರ ಪರಕೀಯರ ದಾಳಿಯಿಂದ ನಮಗೆ ನಮ್ಮತನ ಮರೆತುಹೋಗಿದೆ. ಅಸ್ತಿತ್ವ ಕಳೆದುಕೊಂಡಿದ್ದೇವೆ. ಈಗ ನಾವು ಸಿಂಹದ ಮರಿಗಳಾಗಬೇಕಿದೆ. ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ರಾಷ್ಟ್ರೀಯ ಭಾವನೆ ಜಾಗೃತಿಯಾಗುತ್ತಿದೆ ಎಂದರು.

ವಾಲ್ಮೀಕಿ, ರಾಮ, ಕೃಷ್ಣ, ಕನಕದಾಸ, ಅಂಬೇಡ್ಕರ್‌ ಅವರ ಜಾತಿಯನ್ನು ನಾವು ನೋಡಿದೆವಾ? ಅವರು ನೀಡಿದ ಕೊಡುಗೆಗಳಿಂದ ಆದರ್ಶರಾದರು. ಮಹಾಪುರುಷರು ನಮಗೆ ಪ್ರೇರಣೆಯಾಗಿದ್ದಾರೆ. ವಿದೇಶಿಗರು ಬಿತ್ತಿದ ವಿಷ ಬೀಜವನ್ನು ಕಾಂಗ್ರೆಸ್ ನವರು ಪೋಷಿಸಿದರು. ಇದರಿಂದ ಭಾರತ ನಮ್ಮದು ಎಂದು ಮರೆಯುವ ಪರಿಸ್ಥಿತಿಗೆ ಕಾಂಗ್ರೆಸ್ ತೆಗೆದುಕೊಂಡು ಹೋಗಿತ್ತು. ಇಂದು ಜಾಗೃತಿ ಬಂದಿದೆ. ರಾಮಮಂದಿರ, ಅಪರೇಷನ್ ಸಿಂದೂರ ಮತ್ತಿತರ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳು ನಮ್ಮಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯವಾಗಿದೆ. ನ್ಯಾಯ ಕೊಡಿಸಲು ನಿಮ್ಮೊಂದಿಗೆ ತಾವು ಇರುವುದಾಗಿ ಕಾಗೇರಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಸಂಚಾಲಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾತಿ ಜನಗಣತಿಯಂತಹ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ಪಕ್ಷಾತೀತವಾಗಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

ದೇಶದಲ್ಲಿ ಬಡವರು ಸಮಾಜದಲ್ಲಿ ಮುನ್ನೆಲೆಗೆ ಬರಬೇಕಾಗಿದೆ. ಅದಕ್ಕೆ ಇನ್ನು ಕೇಂದ್ರದಿಂದ ನಡೆಯಲಿರುವ ಜಾತಿ ಜನಗಣತಿ ಪೂರಕವಾಗಲಿದೆ ಎಂದು ಹೇಳಿದರು.

ರಾಮಕೃಷ್ಣಾಶ್ರಮದ ಭಾವೇಶಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹಿಂದುಳಿದ ವರ್ಗಗಳ ಜನತೆ ಜಾಗೃತರಾಗಬೇಕಿದೆ. ಜಾತಿ ಜನಗಣತಿಗೆ ಸಂಬಂಧಿಸಿದಂತೆ ಸದನದಲ್ಲಿ ಗಮನ ಸೆಳೆಯುತ್ತೇನೆ. ಈ ವಿಚಾರಗೋಷ್ಠಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ಮುಖಂಡ ಎನ್.ಎಸ್.ಹೆಗಡೆ ಸ್ವಾಗತಿಸಿದರು. ಕೆ.ಜಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಯಬೇಕಾಗಿದೆ ಎಂದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ಪ್ರಮುಖರಾದ ರಾಜೇಂದ್ರ ನಾಯ್ಕ, ಗೋವಿಂದ ನಾಯ್ಕ, ವೆಂಕಟೇಶ ನಾಯ್ಕ ಇದ್ದರು.

ರೂಪಾಲಿ ನಾಯ್ಕಗೆ ಪ್ರಶಂಸೆ: ವೇದಿಕೆಯಲ್ಲಿ ವಿವಿಧ ಸಮಾಜಗಳ ಅಧ್ಯಕ್ಷರು, ಗಣ್ಯರಿಗೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಅತಿಥಿಗಳನ್ನು ಡೊಳ್ಳು ವಾದ್ಯದ ಮೂಲಕ ಸ್ವಾಗತಿಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರದಷ್ಟು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.

ವೇದಿಕೆಯಲ್ಲಿ ವಿವಿಧ ಸಮಾಜಗಳ ಅಧ್ಯಕ್ಷರು, ಗಣ್ಯರಿಗೆ ಅವಕಾಶ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಅತಿಥಿಗಳನ್ನು ಡೊಳ್ಳು ವಾದ್ಯದ ಮೂಲಕ ಸ್ವಾಗತಿಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾವಿರದಷ್ಟು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.