ಕನ್ನಡಪ್ರಭ ವಾರ್ತೆ ಅರಸೀಕೆರೆ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಪ್ರಕೃತಿಯನ್ನು ಉಳಿಸುವ ಮೂಲಕವೇ ಮಾನವ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಸಮರ್ಪಣ ಸಂಸ್ಥೆಯ ಸ್ಥಾಪಕ ಜಯಪ್ರಕಾಶ್ ಗುರೂಜಿ ಹೇಳಿದರು.ನಗರದ ತರಳಬಾಳು ಪಿಯು ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮರ್ಪಣ ಸಂಸ್ಥೆ ಹಾಗೂ ತರಳಬಾಳು ಪಿಯು ಕಾಲೇಜು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು ಅವರು ಮನೆಗೊಂದು ಮರ ದೇಶಕ್ಕೊಂದು ವರ ಎಂಬ ಸಂದೇಶವನ್ನು ನೀಡಿದ ಅವರು, ಗಾಳಿ, ನೀರು, ಮಣ್ಣು ಹಾಗೂ ಸೂರ್ಯನ ಬೆಳಕಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ಅಗತ್ಯವಾಗಿದೆ. ಅರಣ್ಯ ನಾಶವನ್ನು ತಡೆಗಟ್ಟಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜೈವಿಕ ವೈವಿಧ್ಯತೆಯ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲಗಳನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತರಳಬಾಳು ಶಾಲೆಯ ಮುಖ್ಯಶಿಕ್ಷಕ ಸುನಿಲ್, ವನ್ಯಜೀವಿ ಸಂಪತ್ತು ಎಂದರೆ ಕೇವಲ ಪ್ರಾಣಿ ಮತ್ತು ಪಕ್ಷಿಗಳಲ್ಲ, ಪ್ರತಿಯೊಂದು ಸಸ್ಯ ಪ್ರಭೇದವೂ ಪ್ರಕೃತಿಯ ಅಮೂಲ್ಯ ಸಂಪತ್ತಾಗಿದೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದು ಹೇಳಿದರು. ಸಮರ್ಪಣ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ ವಿಜಯಕುಮಾರ್ ಹಾಗೂ ಉಪಾಧ್ಯಕ್ಷೆ ಸುಮಾ ಧನಂಜಯ್ ಪರಿಸರ ಜಾಗೃತಿಯ ಮಹತ್ವ ಕುರಿತು ಮಾತನಾಡಿದರುಕಾರ್ಯಕ್ರಮದಲ್ಲಿ ತರಳಬಾಳು ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಕಾಲೇಜಿನ ಶಿಕ್ಷಕ ವೃಂದ, ಸಮರ್ಪಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪರಿಸರ ಸಂರಕ್ಷಣೆ ಕುರಿತ ಮಹತ್ವದ ಮಾಹಿತಿಗಳನ್ನು ಅರಿತುಕೊಂಡರು.