ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಇಂದಿನ ಡಿಜಿಟಲ್ ಯುಗದಲ್ಲಿ ವೃತ್ತಿಪರ ಛಾಯಾಗ್ರಹಣಕ್ಕೆ ಹಲವು ಸವಾಲುಗಳಿದ್ದು, ಛಾಯಾಗ್ರಾಹಕರು ವೃತ್ತಿ ಕೌಶಲ್ಯವನ್ನು ನಿರಂತರ ಕಾಯ್ದುಕೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಅನು ಛಾಯಾಚಿತ್ರೋತ್ಸವ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಛಾಯಾಗ್ರಾಹಕರಿಗೆ ಶಾಂತತೆ, ತಾಳ್ಮೆ. ಚುರುಕುತನ ಅತ್ಯಂತ ಅವಶ್ಯ. ಹಿರಿಯ ಛಾಯಾಗ್ರಾಹಕ ಅನು ಶಾಂತರಾಜು ಅವರು ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿದ್ದೇ ಈ ಎತ್ತರಕ್ಕೆ ಬೆಳೆದು ಇತರ ಛಾಯಾಗ್ರಾಹಕರು, ಅವರ ಮಕ್ಕಳಿಗೂ ನೆರವಾಗಲು ಸಾಧ್ಯವಾಗಿದೆ ಎಂದರು.ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಮಾತನಾಡಿ, ಕೆಲಸದಲ್ಲಿ ಪ್ರಾಮಾಣಿಕತೆ ತೋರಿದರೆ ಗೌರವ ತಾನಾಗಿಯೇ ಹಿಂಬಾಲಿಸುತ್ತದೆ. ಛಾಯಾಗ್ರಾಹಕರು ಅನೇಕ ಕಷ್ಟಗಳಲ್ಲಿ ಇಂದು ಬದುಕುತ್ತಿದ್ದಾರೆ. ಅದರಲ್ಲೂ ಪತ್ರಿಕಾ ಛಾಯಾಗ್ರಾಹಕರು, ವಿಡಿಯೋಗ್ರಾಪರ್‌ಗಳು ನಿತ್ಯ ಸವಾಲಿನಲ್ಲಿ ಬದುಕುತ್ತಾರೆ ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಹಿಮಂತರಾಜ್ ಮಾತನಾಡಿ, ನಾನು ಪತ್ರಿಕೋದ್ಯಮ ಪದವಿ ಓದುತ್ತಿದ್ದಾಗ ಶಾಂತರಾಜ್ ಅವರ ಬಳಿ ವೃತ್ತಿ ಅನುಭವ ಕಲಿತೆ. ಅವರ ಮಾರ್ಗದರ್ಶನದಲ್ಲಿ ನಾನು ಮೊದಲ ಛಾಯಾಚಿತ್ರ ಸೆರೆ ಹಿಡಿದಿದ್ದೆ. ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ ಅವರದ್ದು. ಫೋಟೋಗ್ರಫಿಯ ವಿವಿಧ ಆಯಾಮಗಳನ್ನು ಕಲಿಸಿದ್ದು, ನನಗೆ ಮುಂದೆ ಪತ್ರಕರ್ತನಾಗಿ ಹಾಗೂ ಪ್ರಸ್ತುತ ವಾರ್ತಾ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಲು ನೆರವಾಗಿದೆ ಎಂದು ಹಳೆಯ ನೆನಪನ್ನು ಹಂಚಿಕೊಂಡರು.ಅನು ಶಾಂತರಾಜು ಮಾತನಾಡಿ, ಇಂದು ಫೋಟೋಗ್ರಾಫರ್‌ಗಳ ಬದುಕೇ ದುಸ್ತರವಾಗಿದೆ. ನನಗೆ ವಾರ್ತಾ ಇಲಾಖೆ ಈ ವೃತ್ತಿಯಲ್ಲಿ ಹೆಚ್ಚು ನೈಪುಣ್ಯವನ್ನು ಕಲಿಸಿತು. ಪತ್ರಿಕಾ ಛಾಯಾಗ್ರಾಹಕನಾಗಿ 150 ರು..ಗಳಿಂದ 18 ಸಾವಿರ ವೇತನ ಪಡೆಯುವವರೆಗೆ ಸೇವೆ ಸಲ್ಲಿಸಿದೆ. ನಾನು ಗಳಿಸಿದ್ದರಲ್ಲಿ ನನ್ನ ವೃತ್ತಿಬಾಂಧವರಿಗೆ ಕೈಲಾದ ನೆರವು ನೀಡುವುದರಲ್ಲಿ ತೃಪ್ತಿಯಿದೆ ಎಂದರು. ಕೆಯುಡಬ್ಯ್ಲುಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಅನು ಛಾಯಾಚಿತ್ರೋತ್ಸವ ಮೂಲಕ ದೇಶದ ವಿವಿಧೆಡೆಯ ಛಾಯಾಗ್ರಾಹಕರನ್ನು ಜಿಲ್ಲೆಗೆ ಆಹ್ವಾನಿಸಿದ್ದ ಶಾಂತರಾಜು ಅವರು ಅದರ ನೆನಪಲ್ಲಿ ಕಳೆದ 20 ವರ್ಷಗಳಿಂದ ವಿಶ್ವ ಛಾಯಾಗ್ರಾಹಣ ದಿನ ಆಚರಿಸಿ ವೃತ್ತಿಬಾಂಧವರನ್ನು, ಗೌರವಿಸಿ ನೆರವಾಗುವ ಕಾರ್ಯಮಾಡುತ್ತಿದ್ದಾರೆ ಎಂದರು.ಐಎಫ್‌ಡಬ್ಯ್ಲುಜೆ ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್ ಮಾತನಾಡಿ, ಹಿರಿಯರು ಮತ್ತು ಯುವಜನರ ನಡುವಿನ ಕೊಂಡಿಯಂತಿರುವ ಶಾಂತರಾಜು ಸದಾ ವೃತ್ತಿ ಕೌಶಲ್ಯವನ್ನು ಮೈಗೂಡಿಸಿಕೊಂಡು ಬಂದಿರುವುದೇ ಅವರ ಯಶಸ್ಸಿಗೆ ಕಾರಣ ಎಂದರು.ಛಾಯಾಗ್ರಾಹಕರ ಮಕ್ಕಳಾದ ಪ್ರಿಯಾಂಕ್ ಆರ್, ಭಾವನ, ಚೇತನ ಅವರಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಛಾಯಾಗ್ರಾಹಕ ಕೆ.ಜಿ.ಎನ್.ಭಾಷ, ಲೈಕಾ ಮಂಜುನಾಥ್ ಹಾಗೂ ಗೋಪಿ ಅವರನ್ನು ಸನ್ಮಾನಿಸಲಾಯಿತು. ಐಎಫ್‌ಡಬ್ಲೂಜೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಜ್ಯ ಸಮಿತಿ ಸದಸ್ಯ ಕುಣಿಗಲ್ ಸಿದ್ಧಲಿಂಗಸ್ವಾಮಿ,ಟಿ.ಇ.ರಘುರಾಮ್, ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಎಸ್.ಡಿ.ಚಿಕ್ಕಣ್ಣ, ಶಂಕರ್, ಕಾಗ್ಗೆರೆ ಸುರೇಶ್, ರೇಣುಕಾಪ್ರಸಾದ್, ಹಿರಿಯ ಛಾಯಾಗ್ರಾಹಕರಾದ ಟಿ.ಎಸ್.ತ್ರಯಂಬಕ, ಸುರೇಶ್, ದಾದಾಪೀರ್, ಚನ್ನಪ್ಪ ಸೇರಿ ಹಲವರು ಪಾಲ್ಗೊಂಡರು. ಜಯನುಡಿ ಜಯಣ್ಣ ಪ್ರಾರ್ಥಿಸಿದರು. ಹರೀಶ್ ಆಚಾರ್ಯ ನಿರೂಪಿಸಿ ವಂದಿಸಿದರು.