ಸಾಲ ಮರುಪಾವತಿಸದ ಕೇಂಬ್ರಿಡ್ಜ್ ಶಾಲೆ ಬ್ಯಾಂಕ್ ಸಿಬ್ಬಂದಿಯಿಂದ ಲಾಕೌಟ್

| Published : Dec 07 2024, 12:34 AM IST

ಸಾಲ ಮರುಪಾವತಿಸದ ಕೇಂಬ್ರಿಡ್ಜ್ ಶಾಲೆ ಬ್ಯಾಂಕ್ ಸಿಬ್ಬಂದಿಯಿಂದ ಲಾಕೌಟ್
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲಕುಪ್ಪೆ ಗೇಟ್ ಬಳಿಯ ಕೇಂಬ್ರಿಡ್ಜ್ ಖಾಸಗಿ ಶಾಲೆ ಬಳಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಶಾಲೆ ಎದುರು ಕಾರ್ಯಕರ್ತರು ಹಾಗೂ ಪೋಷಕರು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಪಟ್ಟಣ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಸಾಲ ಮರು ಪಾವತಿಸದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಶಾಲೆಯನ್ನು ಲಾಕೌಟ್ ಮಾಡಿದ ಹಿನ್ನೆಲೆಯಲ್ಲಿ ಶಾಲೆ ಮುಂಭಾಗ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪೋಷಕರು ಶಾಲೆ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೂಡಲಕುಪ್ಪೆ ಗೇಟ್ ಬಳಿಯ ಕೇಂಬ್ರಿಡ್ಜ್ ಖಾಸಗಿ ಶಾಲೆ ಬಳಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಶಾಲೆ ಎದುರು ಕಾರ್ಯಕರ್ತರು ಹಾಗೂ ಪೋಷಕರು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿದ್ದ ಮಕ್ಕಳನ್ನು ಏಕಾಏಕಿ ಶಾಲೆಯಿಂದ ಹೊರ ಕಳುಹಿಸಿ ಶಾಲೆ ಮುಚ್ಚಿ ಮಕ್ಕಳಿಗೆ ರಜೆ ಘೋಷಣೆ ಮಾಡಿ ಮೊಬೈಲ್‌ಗಳಿಗೆ ಸಂದೇಶಗಳ ಹಾಕಿರುವ ಶಾಲಾ ಶಿಕ್ಷಕರು, ಸೋಮವಾರದವರೆಗೂ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಕಳೆದ 6 ತಿಂಗಳ ಹಿಂದೆಯೂ ಸಹ ಶಾಲಾ ಲಾಕೌಟ್ ಮಾಡಲಾಗಿತ್ತು. ಮತ್ತೆ ಇದೀಗ ಬ್ಯಾಂಕ್ ನವರಿಂದ ಶಾಲೆಗೆ ಬೀಗ ಜಡಿದಿರುವುದರಿಂದ ಮಕ್ಕಳ ಭವಿಷ್ಯ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗ ಶಾಲೆಗೆ ಲಕ್ಷಾಂತರ ರು. ಶುಲ್ಕ ಕಟ್ಟಿದ್ದಾರೆ. ಈಗ ಏಕಾಏಕಿ ಶಾಲೆ ಬಂದ್ ಮಾಡಿದ್ದರಿಂದ ಕಂಗಾಲು ಆಗಿದ್ದಾರೆ. ಈಗಾಗಲೇ ಸಾಲ ಮಾಡಿ ಮಕ್ಕಳಿಗೆ ಶುಲ್ಕಗಳ ಕಟ್ಟಿ ಓದಲು ಕಳುಹಿಸಲಾಗಿದೆ. ಮಕ್ಕಳ ವಿದ್ಯಾಭ್ಯಾಸದ ಗತಿ ಏನು ಎಂದು ಶಾಲೆ ಮುಖ್ಯಸ್ಥ ಹರಳಹಳ್ಳಿ ವಿಶ್ವನಾಥ್ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕೂಡಲೇ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ವಿದ್ಯಾರ್ಥಿ ಮತ್ತು ಪೋಷಕರ ಸಮಸ್ಯೆ ಬಗೆ ಹರಿಸಬೇಕು. ಒಂದು ವೇಳೆ ಶೀಘ್ರ ಶಾಲೆ ತೆರೆಯದಿದ್ದರೆ ಪಟ್ಟಣದ ಶಿಕ್ಷಣ ಇಲಾಖೆ ಎದುರು ಪೋಷಕರು ಹಾಗೂ ಕನ್ನಡ ಪರ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್, ಮಹಿಳಾ ಅಧ್ಯಕ್ಷೆ ಛಾಯದೇವಿ ಸೇರಿದಂತೆ ಪೋಷಕರು ಭಾಗವಹಿಸಿದ್ದರು.