ಆದೇಶದೊಂದಿಗೆ ಅಫಜಲ್ಪುರಕ್ಕೆ ಬಂದಿದ್ದೇನೆ: ಫೌಜಿಯಾ ತರನ್ನುಮ್‌

| Published : Mar 27 2024, 01:06 AM IST

ಸಾರಾಂಶ

ಲೋಕಸಭೆ ಚುನಾವಣೆ ನಿಮಿತ್ತ ನಿತ್ಯ ಎಡೆಬಿಡದ ಕೆಲಸಗಳಿರುವುದರಿಂದ ನಿಮ್ಮ ಸತ್ಯಾಗ್ರಹ ಸ್ಥಳಕ್ಕೆ ಬಂದಿಲ್ಲ. ಆದರೆ, ನಾನು ಜನಪರ ಕಾಳಜಿಯಿಂದಲೇ ಏನೆಲ್ಲಾ ಕೆಲಸ ಮಾಡಬೇಕು ಅದನ್ನು ಮಾಡಿದ್ದೇನೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೇನ್ಸ್ ಮತ್ತು ಪತ್ರ ವ್ಯವಹಾರ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಲೋಕಸಭೆ ಚುನಾವಣೆ ಒತ್ತಡದ ಕೆಲಸ ಇರುವುದರಿಂದ ಅಫಜಲ್ಪುರದ ಸತ್ಯಾಗ್ರಹ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ. ಆದರೂ ಕೂಡ ನಿತ್ಯ ಇಲ್ಲಿನ ಆಗುಹೋಗುಗಳ ಕುರಿತು ತಹಸೀಲ್ದಾರರು ಹಾಗೂ ಸಂಬಂಧ ಪಟ್ಟವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೆ, ಜೊತೆಗೆ ಸೊಲ್ಲಾಪುರ ಜಿಲ್ಲಾಧಿಕಾರಿಗಳೊಂದಿಗೆ, ರಾಜ್ಯ ಸರ್ಕಾರದೊಂದಿಗೆ ಪ್ರತಿದಿನ ಸಂಪರ್ಕದಲ್ಲಿದ್ದು ಭೀಮಾ ನದಿಗೆ ನೀರು ಹರಿಸುವ ಕುರಿತು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದೆ. ಅಲ್ಲದೆ ನೀರು ಹರಿಸುವ ಆದೇಶ ಪ್ರತಿಯೊಂದಿಗೆ ಅಫಜಲ್ಪುರಕ್ಕೆ ಬರಬೇಕೆಂದು ನಿರ್ಧರಿಸಿದ್ದರಿಂದ ಇಂದು ಆದೇಶ ಪ್ರತಿಯೊಂದಿಗೆ ಸತ್ಯಾಗ್ರಹ ಸ್ಥಳಕ್ಕೆ ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಶಿವಕುಮಾರ ನಾಟೀಕಾರ ಅವರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನಾಟಿಕಾರ ಅವರಿಗೆ ಓಆರ್‌ಎಸ್‌ ಕುಡಿಸಿ ಆದೇಶ ಪ್ರತಿ ನೀಡಿ ಮಾತನಾಡಿದರು.

ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನನಗೂ ಈ ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದೆ. ಆದರೆ, ಲೋಕಸಭೆ ಚುನಾವಣೆ ನಿಮಿತ್ತ ನಿತ್ಯ ಎಡೆಬಿಡದ ಕೆಲಸಗಳಿರುವುದರಿಂದ ನಿಮ್ಮ ಸತ್ಯಾಗ್ರಹ ಸ್ಥಳಕ್ಕೆ ಬಂದಿಲ್ಲ. ಆದರೆ, ನಾನು ಜನಪರ ಕಾಳಜಿಯಿಂದಲೇ ಏನೆಲ್ಲಾ ಕೆಲಸ ಮಾಡಬೇಕು ಅದನ್ನು ಮಾಡಿದ್ದೇನೆ. ಸೊಲ್ಲಾಪುರ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೇನ್ಸ್ ಮತ್ತು ಪತ್ರ ವ್ಯವಹಾರ ಮಾಡಿದ್ದೇನೆ. ಅಫಜಲ್ಪುರ ಶಾಸಕರು ಕೂಡ ಬಹಳ ಮುತುವರ್ಜಿ ವಹಿಸಿ ಸರ್ಕಾರದ ಸಚಿವರೊಂದಿಗೆ ಸಮಾಲೋಚನೆ ಮಾಡಿ ನೀರು ಹರಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದಾರೆ. ನಮ್ಮ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರೊಂದಿಗೆ ನಿತ್ಯ ದೂರವಾಣಿಯಲ್ಲಿ ಮಾತನಾಡಿ, ಸತ್ಯಾಗ್ರಹದ ಕುರಿತು ನಾಟೀಕಾರ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದೆ ಎಂದರು.

ನಿಮ್ಮ ಜನಪರ ಹೋರಾಟ ಯಶಸ್ವಿಯಾಗಿದೆ. ಮುಂದಿನ ಕಾನೂನು ಹೋರಾಟದ ಕುರಿತು ಶಾಸಕರು, ಸಚಿವರೊಂದಿಗೆ ಸಮಾಲೋಚನೆ ಮಾಡಲು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.

ಎಸ್‌ಪಿ ಅಕ್ಷಯ ಹಾಕೆ ಮಾತನಾಡಿ, ಬಹಳ ಸಮಾಧಾನವಾಗಿ ಮತ್ತು ಕಾನೂನು ಸುವ್ಯವಸ್ಥೆಗೆ ಕುಂದು ಬಾರದ ರೀತಿಯಲ್ಲಿ ಸತ್ಯಾಗ್ರಹ ಮಾಡಿದ್ದೀರಿ. ನಿಮ್ಮಹೋರಾಟದ ಕುರಿತು ಪೊಲೀಸ್‌ರಿಂದ ನಾವು ನಿತ್ಯ ಮಾಹಿತಿ ಪಡೆದುಕೊಂಡಿದ್ದೇವೆ. ಹೋರಾಟದ ದಿನಗಳಲ್ಲಿ ಪೊಲೀಸ್ ಇಲಾಖೆ ನಿಮಗೆಲ್ಲ ರೀತಿಯ ಸಹಕಾರ ನೀಡಿದೆ. ನೀವು ಕೂಡ ಕಾನೂನು ಸುವ್ಯವಸ್ಥೆಗೆ ಕುಂದು ಬಾರದಂತೆ ನಡೆದುಕೊಂಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಶೀಘ್ರ ನಿಮ್ಮ ಬೇಡಿಕೆಗಳು ಈಡೆರಿ ಜನಸಾಮಾನ್ಯರೆಲ್ಲ ನೆಮ್ಮದಿಯಿಂದ ಇರುವಂತಾಗಲೆಂದು ಆಶಿಸುತ್ತೇನೆ ಎಂದರು.

ತಹಸೀಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ತಾಲೂಕು ಆಡಳಿತ ಸತ್ಯಾಗ್ರಹ ಆರಂಭದಿಂದ ಇಂದಿನ ತನಕ ನಿಮ್ಮೊಂದಿಗೆ ನಿಂತುಕೊಂಡಿದೆ. ನಾನು ಸತ್ಯಾಗ್ರಹ ಸ್ಥಳಕ್ಕೆ ಬಂದಾಗಲೊಮ್ಮೆ ಎಲ್ಲರೂ ಜಿಲ್ಲಾಧಿಕಾರಿಗಳು ಏಕೆ ಬರುವುದಿಲ್ಲ ಎನ್ನುವ ಪ್ರಶ್ನೆ ಮಾಡುತ್ತಿದ್ದೀರಿ, ಎಂತಹ ಒತ್ತಡದ ನಡುವೆ ಜಿಲ್ಲಾಧಿಕಾರಿಗಳು ಕೆಲಸ ಮಾಡಿದ್ದಾರೆನ್ನುವುದು ನನಗೆ ಗೊತ್ತಿದೆ. ಅವರಿಗಿರುವ ಜನಪರ ಕಾಳಜಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಬೇಕಾಗುತ್ತದೆ. ನೀರು ಹರಿಸುವ ಆದೇಶ ಪ್ರತಿಯೊಂದಿಗೆ ಅಫಜಲ್ಪುರಕ್ಕೆ ಬರುತ್ತೇನೆಂದು ಹೇಳಿದ್ದರು, ಈಗ ಆದೇಶ ಪ್ರತಿಯೊಂದಿಗೆ ಬಂದಿದ್ದಾರೆ. ನೀವು ಹೋರಾಟಗಾರರಾಗಿ ಗೆಲುವು ಸಾಧಿಸಿದ್ದೀರಿ. ಜಿಲ್ಲಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡಿ ಅವರು ತಮ್ಮ ಕಾರ್ಯಪ್ರವೃತ್ತತೆಯನ್ನು ಮೇರೆದಿದ್ದಾರೆ. ಹೋರಾಟವನ್ನು ಶಾಂತರೀತಿಯಿಂದ ಮಾಡಿದ ಎಲ್ಲರಿಗೂ ತಾಲೂಕು ಆಡಳಿತದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಂತೋಷ ದಾಮಾ, ಸಂತೋಶ್ರೀ ಕಾಳೆ, ದಯಾನಂದ ದೊಡ್ಮನಿ, ಚಿದಾನಂದ ಮಠ, ಶಾಂತು ಅಂಜುಟಗಿ, ಡಿವೈಎಸ್‌ಪಿ ಮಹಮದ್ ಷರೀಫ್ ರಾವುತರ್ ಸೇರಿದಂತೆ ಇತರರು ಇದ್ದರು.