ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸಹಕಾರಿಯಾಗಿವೆ. ಹರವೆ ಭಾಗದಲ್ಲಿ ಈ ಶಿಬಿರ ನಡೆಯುತ್ತಿರುವುದು ಸಂತಸವಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.ತಾಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ವಿದ್ಯಾ ಸಂಸ್ಥೆಯ ಅವರಣದಲ್ಲಿ ಮೈಸೂರಿನ ಜೆಎಸ್‌ಎಸ್ ಅಸ್ಪತ್ರೆ, ಹರವೆ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ, ಮೈಸೂರಿನ ಶ್ರೀ ಚಾಮರಾಜೇಶ್ವರಿ ಅಕ್ಕನ ಬಳಗ, ಐಎಲ್‌ವೈಎಫ್ ಮೈಸೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನೇಕ ವರ್ಷಗಳಿಂದ ಮೈಸೂರಿನ ಜೆಎಸ್‌ಎಸ್ ಅಸ್ಪತ್ರೆ ಹಾಗೂ ಹರವೆ ಶ್ರೀಗಳ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತಿದೆ. ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ರೈತರು ಹಾಗೂ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕಾರ್ಯ ಒತ್ತಡಗಳ ನಡುವೆಯೂ ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ತಪಾಸಣೆ ಮಾಡಿಸಿಕೊಂಡು ಸಲಹೆ ಸೂಚನೆ ಪಡೆದು ಔಷಧೋಪಚಾರ ಮಾಡಿಸಿಕೊಂಡರೆ, ದೊಡ್ಡ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ತಜ್ಞ ವೈದ್ಯರ ತಂಡವೇ ನಮ್ಮ ಗ್ರಾಮಕ್ಕೆ ಬಂದಿದೆ. ಉಚಿತವಾಗಿ ಇಸಿಜಿ, ರಕ್ತ ಪರೀಕ್ಷೆ, ಶುಗರ್ ಇತರೆ ಪರೀಕ್ಷೆಗಳನ್ನು ಮಾಡುತ್ತಾರೆ ಎಂದು ತಿಳಿಸಿದರು.ಹರವೆ ವಿರಕ್ತ ಮಠಾಧ್ಯಕ್ಷ ಸರ್ಪ ಭೂಷಣ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷವು ಸಹ ನಡೆಯುವ ಶಿಬಿರದಲ್ಲಿ ಹರವೆ ಹಾಗೂ ಸುತ್ತಮುತ್ತಲಿನ ಗ್ರಾಮಗಳು ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಈ ಬಾರಿಯು ಸಹ ಜೆಎಸ್‌ಎಸ್ ಸಂಸ್ಥೆ, ಚಾಮರಾಜೇಶ್ವರಿ ಅಕ್ಕನ ಬಳಗ ಹಾಗೂ ಐಎಲ್‌ವೈಎಫ್ ಹಾಗೂ ಇತರೆ ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಇದೊಂದು ಪುಣ್ಯ ಕಾರ್ಯವಾಗಿದ್ದು, ಆರೋಗ್ಯ ಭಾಗ್ಯ ಇದ್ದರೆ ಇತರೆ ಎಲ್ಲಾ ಭಾಗ್ಯವನ್ನು ಪಡೆದುಕೊಳ್ಳಲು ಸಾಧ್ಯ. ಹೀಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ, ದೊಡ್ಡ ಗಂಡಾಂತರಗಳು ತಪ್ಪುತ್ತದೆ ಎಂದರು.
ಆರೋಗ್ಯ ತಪಾಸಣೆ ಶಿಬಿರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದು ೬೫೦ಕ್ಕು ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚಾಮರಾಜೇಶ್ವರಿ ಅಕ್ಕನ ಬಳಗದ ಅಧ್ಯಕ್ಷ ಮಾದಲಾಂಬಿಕೆ, ಹಂಗಳ ಶ್ರೀ, ಮೈಸೂರಿನ ಜೆಎಸ್‌ಎಸ್ ಅಸ್ಪತ್ರೆಯ ವೈದ್ಯಾಧಿಕಾರಿ ಶಾಂತಮಲ್ಲಪ್ಪ, ಐಎಲ್‌ವೈಎಫ್ ಅಧ್ಯಕ್ಷ ಮಹದೇವಪ್ರಸಾದ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಉಪಾಧ್ಯಕ್ಷ ಮಹೇಶ್, ದೊಡ್ಡರಾಯಪೇಟೆ ಗಿರೀಶ್, ಜಿಪಂ ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ಕಬ್ಬಹಳ್ಳಿ ಮಹೇಶ್, ಮಹಾಸಭಾದ ಅಧ್ಯಕ್ಷ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂಕು ಅಧ್ಯಕ್ಷ ಬಾಲಚಂದ್ರಮೂರ್ತಿ, ಜೆಎಸ್‌ಎಸ್ ಪಿಆರ್‌ಒ ಆರ್.ಎಂ.ಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಶ್, ಅಕ್ಕನ ಬಳಗ ಪ್ರಧಾನ ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ನಿರ್ದೇಶಕರಾದ ಸುನಿತಾಗುರು, ರೇಣುಕಾ ಇದ್ದರು.