ಮತದಾನಕ್ಕಾಗಿ ಕೈ, ಕಮಲ, ಪಕ್ಷೇತರ ಅಭ್ಯರ್ಥಿಗಳ ಪರ ಪ್ರಚಾರ

| Published : Jun 02 2024, 01:45 AM IST

ಸಾರಾಂಶ

ಬಳ್ಳಾರಿ ಸೇರಿದಂತೆ ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳ ಶೈಕ್ಷಣಿಕ ಸಮಸ್ಯೆಗಳಿಗೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಶ್ರಮಿಸಿದ್ದಾರೆ.

ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಚುರುಕುಗೊಂಡಿದ್ದು, ಆಯಾ ಪಕ್ಷಗಳ ಮುಖಂಡರು ನಗರದಲ್ಲಿ ಪ್ರಚಾರ ನಡೆಸಿ, ಮತಯಾಚಿಸಿದರು.ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿರುವ ವಕೀಲರ ಸಂಘಕ್ಕೆ ಭೇಟಿ ನೀಡಿದ ನಗರ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ ಮತ ನೀಡುವಂತೆ ವಕೀಲರಲ್ಲಿ ಮನವಿ ಮಾಡಿದರು.

ಬಳ್ಳಾರಿ ಸೇರಿದಂತೆ ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳ ಶೈಕ್ಷಣಿಕ ಸಮಸ್ಯೆಗಳಿಗೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಶ್ರಮಿಸಿದ್ದಾರೆ. 371(ಜೆ) ಕಾಯ್ದೆ ಸಮರ್ಪಕ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ವೇಳೆ ಸದನದಲ್ಲಿ ಈ ಭಾಗದ ಅಭಿವೃದ್ಧಿಗೆ ಧ್ವನಿ ಎತ್ತಿದ್ದಾರೆ. ಸಾಕಷ್ಟು ಅನುದಾನವನ್ನು ಸಹ ಹಂಚಿಕೆ ಮಾಡಿದ್ದಾರೆ. ಅಮರನಾಥ ಪಾಟೀಲ್ ಅವರ ಸೇವೆ ಪರಿಗಣಿಸಿ, ಬಿಜೆಪಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು ವಕೀಲರು ಮತದಾನ ಮಾಡುವ ಮೂಲಕ ಚುನಾಯಿಸಬೇಕು ಎಂದು ಮನವಿ ಮಾಡಿದರು. ಹಿರಿಯ ವಕೀಲ ಸಿದ್ದಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎರ್ರಿಗೌಡ, ಸಾಧನಾ ಹಿರೇಮಠ, ರವೀಂದ್ರನಾಥ್ ಮತ್ತಿತರರಿದ್ದರು.

ಮತದಾನಕ್ಕೆ ಮನವಿ ಮಾಡಿದ ಪ್ರಶಾಂತ್:

ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರಿಗೆ ಮತದಾನ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಪ್ರಗತಿಗೆ ಸಹಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ವೈದ್ಯರಲ್ಲಿ ಮನವಿ ಮಾಡಿದರು.

ನಗರದ ವಿಮ್ಸ್ ಸಭಾಂಗಣದಲ್ಲಿ ವೈದ್ಯರೊಂದಿಗೆ ಸಭೆ ನಡೆಸಿದ ಅವರು, ಚಂದ್ರಶೇಖರ ಪಾಟೀಲ್ ಅವರು ಈ ಭಾಗದ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಂದಿದ್ದಾರೆ. ಸದನದಲ್ಲೂ ಧ್ವನಿ ಎತ್ತಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಚಂದ್ರಶೇಖರ ಪಾಟೀಲ್ ಅವರಿಗೆ ಶೈಕ್ಷಣಿಕ ವಲಯದಲ್ಲಾಗುತ್ತಿರುವ ಬೆಳವಣಿಗೆಗಳು ಹಾಗೂ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಚುನಾಯಿಸಬೇಕು ಎಂದು ಕೇಳಿದರು. ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಸೇರಿದಂತೆ ವಿಮ್ಸ್‌ನ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಬಳಿಕ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘಕ್ಕೆ ತೆರಳಿದ ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮತಯಾಚಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಕಾಂಡ್ರಾ ಸತೀಶ್, ವಿವೇಕ್, ವಕೀಲರ ಸಂಘದ ಅಧ್ಯಕ್ಷ ಎರ್ರಿಗೌಡ, ಬುಡಾ ಅಧ್ಯಕ್ಷ ಆಂಜಿನೇಯಲು ಇದ್ದರು.

ಪಕ್ಷೆತರ ಅಭ್ಯರ್ಥಿ ಪರ ಆಪ್ ಪ್ರಚಾರ:

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಪರ ಆಮ್‌ ಆದ್ಮಿ ಪಕ್ಷದ ಮುಖಂಡರು ನಗರದ ವಿವಿಧೆಡೆ ಪ್ರಚಾರ ನಡೆಸಿ, ಮತದಾನಕ್ಕೆ ಮನವಿ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ, ಕರ್ನಾಟಕ ಕ್ರಿಯಾಶೀಲ ಪದವೀಧರರ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಲಕ್ಷ್ಮಣ ಎಸ್.ಭಂಡಾರಿ ಮತ್ತಿತರರು ಪಾಲ್ಗೊಂಡು ಪಕ್ಷೇತರ ಅಭ್ಯರ್ಥಿ ಪರ ಮತಯಾಚಿಸಿದರು.

ಬಳ್ಳಾರಿ ನಗರ, ಗ್ರಾಮೀಣ ವಿಧಾನಸಭಾ ಕ್ಷೇತ್ರ, ಕುರುಗೋಡು ಪ್ರದೇಶದಲ್ಲಿ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಪರ ಅಭಿಮಾನಿಗಳ ಬಳಗದವರು ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಪ್ರತಿ ಬಾರಿ ಬೀದರ್, ಕಲಬುರಗಿ ಭಾಗದ ಜನರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಬಾರಿ ನಮ್ಮದೇ ಜಿಲ್ಲೆಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.