ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
೨೦೨೫ರ ಜನವರಿ ಒಂದಕ್ಕೆ ಒಳಪಟ್ಟ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನ ಜಾರಿಯಲ್ಲಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಅ.೨೯ ವರೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ೨೮ನೇ ನವೆಂಬರ್ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನ.೨೮ ಕೊನೆಯ ದಿನ ಎಂದು ಹೇಳಿದರು.
ಹೆಸರು ಸೇರಿಸಲು ಅವಕಾಶದೋಷರಹಿತ ಹಾಗೂ ನಿಖರವಾದ ಮತದಾರರ ಪಟ್ಟಿ ಸಿದ್ಧಪಡಿಸಲು ಜಿಲ್ಲಾಡಳಿತ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಬಿ.ಎಲ್.ಒಗಳಿಂದ ಮನೆ ಮನೆ ಭೇಟಿ ಮಾಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆನ್‌ಲೈನ್ ಬಿ.ಎಲ್.ಒ ಆಪ್ ಮೂಲಕ ಪರಿಷ್ಕರಿಸಲಾಗಿದೆ. ಚುನಾವಣಾ ಆಯೋಗವು ನೀಡಿರುವ ೬೪ ಕಾಲ್ಮಂಗಳ ಮಾನದಂಡ ಸಹ ಈ ಮನೆ ಮನೆ ಭೇಟಿ ಸಂದರ್ಭದಲ್ಲಿ ನಮೂದು ಮಾಡಲಾಗಿದೆ.
೧೮ ವರ್ಷ ತುಂಬಿರುವ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಸಲುವಾಗಿ ಆಯೋಗವು ವರ್ಷದಲ್ಲಿ ೪ ಬಾರಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ವರ್ಷದ ಯಾವುದೇ ತಿಂಗಳಿನಲ್ಲಿ ೧೮ ತುಂಬುವ ಯುವ ಮತದಾರರು ಅಯಾ ಅಭಿಯಾನದ ದಿನಾಂಕದೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮೃತ ಮತದಾರರನ್ನು ಕೈಬಿಡುವ ಕ್ರಮಕ್ಕಾಗಿ ಜಿಲ್ಲಾಢಳಿತದ ಬೇರೆ ಬೇರೆ ಯೋಜನೆಗಳಿಂದ ಫಲಾನುಭವಿಗಳ ಮಾಹಿತಿಯನ್ನು ತಾಳೆಮಾಡಿ ಮೃತ ಮತದಾರರ ಸಂಬಂಧಿಕರನ್ನು ಗುರುತಿಸಿ ಅವರಿಂದ ಮೃತರ ವಿವರಗಳನ್ನು ಪಡೆದು ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ಕೈಬಿಡುವ ವಿನೂತನ ಕ್ರಮವನ್ನು ಜಿಲ್ಲಾಢಳಿತ ಜಾರಿ ಮಾಡಿದೆ.೨೯ನೇ ಅಕ್ಟೊಬರ್ ವೇಳೆಗೆ ೬೪೦೩೪೨ ಪುರುಷರು, ೬೫೫೩೬೯ ಮಹಿಳೆಯರು, ೧೬೪ ಇತರರು ಸೇರಿದ ಒಟ್ಟು ೧೨೯೫೮೭೫ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಡಳಿತದ ವೆಬ್ಸೈಟ್ ನಲ್ಲಿ ಪ್ರಚುರಪಡಿಸಲಾಗಿದೆ. ಅದರಲ್ಲಿ ೧೮-೧೯ ವರ್ಷ ವಯಸ್ಸಿನ ೨೧೪೮೯ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೫೨೯೨ ವಿಶೇಷ ಚೇತನ ಮತದಾರರಿದ್ದು, ೧೫೩೮ ಮತಗಟ್ಟೆಗಳು ಇವೆ ಎಂದರು. ಈ ವೇಳೆ ಎಡಿಸಿ ಮಂಗಳ ಇದ್ದರು.