ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಗ್ರಾಮದ ಮತಪ್ರಚಾರ ನಡೆಸುತ್ತಿದ್ದ ಒಂದೇ ಕುಟುಂಬದ ಅಪ್ಪ ಮತ್ತು ಮಗನ ಮೇಲೆ ಅದೇ ಗ್ರಾಮದ ಜೆಡಿಎಸ್ ಬೆಂಬಲಿಗರು ಹಲ್ಲೆ ನಡೆಸಿದ್ದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಸಿಂಗಾಪುರ ಗ್ರಾಮದ ಈರೇಗೌಡರ ಪುತ್ರ ಮೊಗಣ್ಣಗೌಡ, ಈತನ ಪುತ್ರ ಬಲರಾಂ (38) ಹಲ್ಲೆಗೊಳಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಲರಾಂ ಮತ್ತು ಮೊಗಣ್ಣಗೌಡ ಸೋಮುವಾರ ರಾತ್ರಿ ಸ್ವಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ವಿಶ್ವನಾಥ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರ ಪರ ಮತಯಾಚನೆಯಲ್ಲಿ ತೊಡಗಿದ್ದರು. ಈ ವೇಳೆ ಇವರ ಬಳಿಗೆ ಆಗಮಿಸಿದ ಅದೇ ಗ್ರಾಮದ ಜೆಡಿಎಸ್ ಕಾರ್ಯಕರ್ತರಾದ ಹರೀಶ್, ಮಂಜೇಗೌಡ, ಕಾರ್ತಿಕ್ ಮತ್ತು ಬೋರೇಗೌಡ ಅವರು ಗುಂಪುಗೂಡಿ ಇದುವರೆಗೂ ಗ್ರಾಮದಲ್ಲಿ ಕಾಂಗ್ರೆಸ್ ಪರ ಯಾರೋಬ್ಬರು ಪ್ರಚಾರ ಮಾಡಿಲ್ಲ. ನೀವು ಕಾಂಗ್ರೆಸ್ ಪರ ಮತ ಯಾಚನೆ ಮಾಡಬಾರದೆಂದು ಎಚ್ಚರಿಸಿ ತಮ್ಮ ಬಳಿಯಿದ್ದ ಮತಪ್ರಚಾರದ ಕರಪತ್ರಗಳು ಮತ್ತು ಗ್ಯಾರಂಟಿ ಕಾರ್ಡುಗಳನ್ನು ಕಿತ್ತು ಹಾಕಿ ಕಲ್ಲು ದೊಣ್ಣೆಗಳಿಂದ ಹಲ್ಲೆನಡೆಸಿದ್ದಾರೆಂದು ಗಾಯಾಳುಗಳಾದ ಬಲರಾಂ ಮತ್ತು ಮೊಗಣ್ಣಗೌಡ ತಿಳಿಸಿದ್ದಾರೆ. ಹಲ್ಲೆಯಿಂದ ಬಲರಾಂ ತಲೆಗೆ, ತಂದೆ ಮೊಗಣ್ಣಗೌಡರ ಕಾಲಿಗೆ ಪೆಟ್ಟಾಗಿದೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಹಲೆ ವಿಷಯ ತಿಳಿದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಬಿ.ಎಲ್.ದೇವರಾಜು, ಕೋಡಿಮಾರನಹಳ್ಳಿ ದೇವರಾಜು, ಚಿನಕುರುಳಿ ರಮೇಶ್ ಮತ್ತು ಶೀಳನೆರೆ ಅಂಬರೀಶ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದರಲ್ಲದೆ ಹಲ್ಲೆ ನಡೆಸಿದ ಜೆಡಿಎಸ್ ಕಾರ್ಯಕರ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.