- ದೇಶಾದ್ಯಂತ 5 ಸಾವಿರ ಕಡೆ ಏಕಕಾಲಕ್ಕೆ ಸಹಸ್ರಾರು ಜನರ ಸಹಿಯುಳ್ಳ ಮನವಿ ಸಲ್ಲಿಕೆ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸುವಂತೆ ಹಿಂದೂಪರ ಸಂಘಟನೆಗಳು, ಸಮಸ್ತ ಹಿಂದುಗಳು, ಗೋವು ಭಕ್ತರು ಏ.27ರಂದು ದಾವಣಗೆರೆ ಸೇರಿದಂತೆ ದೇಶವ್ಯಾಪಿ 5 ಸಾವಿರ ಕಡೆಗಳಲ್ಲಿ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರಿಗೆ ಮನವಿ ಅರ್ಪಿಸಲಾಗುವುದು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮುಖಂಡರಾದ ರಾಜು ವೀರಣ್ಣ, ಆಲೂರು ನಿಂಗರಾಜ, ಪರಶುರಾಮ ನಡುಮನಿ ತಿಳಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಶ್ರೀ ಜಯದೇವ ವೃತ್ತದಿಂದ ಅಶೋಕ ರಸ್ತೆ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಕೇಂದ್ರ, ಎಲ್ಲ ರಾಜ್ಯ ಸರ್ಕಾರಗಳು, ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಅರ್ಪಿಸಲಾಗುವುದು. ಆ ಮೂಲಕ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಒತ್ತಾಯಿಸಲಾಗುವುದು. ಅಭಿಯಾನದಲ್ಲಿ ಎಲ್ಲ ಪಕ್ಷಗಳು, ಜಾತಿ, ಧರ್ಮ, ಸಮುದಾಯದವರೂ, ಹಿಂದೂಪರ ಸಂಟನೆಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಗೋವು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು, ಜೀವನದ ಪರಿಸರ ವ್ಯವಸ್ಥೆಯಲ್ಲಿ ಗೋವುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಗೋ ಮಾತೆಯಲ್ಲಿ 3 ಕೋಟಿ ದೇವರುಗಳು ನೆಲೆಸಿದ್ದಾರೆಂಬ ನಂಬಿಕೆ ಅನಾದಿಯಿಂದಲೂ ನಮ್ಮ ನೆಲದಲ್ಲಿದೆ. ಗೋವಿನ ಹಾಲನ್ನು ಅಮೃತಕ್ಕೆ ಸಮಾನವೆಂದೇ ಕರೆಯಲ್ಪಡಲಾಗುತ್ತದೆ. ನೈಸರ್ಗಿಕ ಕೃಷಿ, ಭೂಮಿ ಆರೋಗ್ಯ, ಜನಾರೋಗ್ಯಕ್ಕೂ ಗೋಮಾತೆಯ ಉತ್ಪನ್ನಗಳು ಅತ್ಯಗತ್ಯ ಎಂದು ತಿಳಿಸಿದರು.
ಗೋ ಮಾತೆಯನ್ನು 2027 ರೊಳಗೆ ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆ ಮಾಡಬೇಕೆಂಬ ಹೋರಾಟದ ಭಾಗವಾಗಿ ಗೋಮಾತೆಯ ಗೌರವದ ಅಭಿಯಾನ ದೇಶವ್ಯಾಪಿ ಹಮ್ಮಿಕೊಳ್ಳಲಾಗುತ್ತಿದೆ. ಗೋಮಾತೆಯ ಗೌರವದ ಅಭಿಯಾನದ ಪ್ರಥಮ ಹಂತವಾಗಿ ಏ.27ರಂದು ದಾವಣಗೆರೆ ಸೇರಿದಂತೆ ದೇಶದ 5 ಸಾವಿರ ಕಡೆ ಏಕಕಾಲಕ್ಕೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ನಮ್ಮ ಮನವಿ ಪುರಸ್ಕರಿಸಿ, ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವ ಎಲ್ಲ ರೀತಿಯ ವಿಶ್ವಾಸವಿದೆ. ಮನವಿ ಸಲ್ಲಿಕೆ ನಂತರ 2ನೇ ಹಂತದಲ್ಲಿ ದೆಹಲಿ ಚಲೋ ಬೃಹತ್ ಕಾರ್ಯಕ್ರಮ ನಡೆಸಲಾಗುವುದು. ದೇಶದ ಎಲ್ಲ ಸಾಧು ಸಂತರು, ಮಠಾಧೀಶರು, ಸ್ವಾಮೀಜಿಗಳು, ಹಿಂದೂ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹಿಂದೂ ಧರ್ಮದ ಅಸಂಖ್ಯಾತ ಅನುಯಾಯಿಗಳು, ಗೋವು ಭಕ್ತರು ಸ್ವಯಂ ಪ್ರೇರಣೆಯಿಂದ ಭಾಗಿಯಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಸಮಿತಿ ಮುಖಂಡರಾದ ಮಲ್ಲೇಶ, ಪ್ರವೀಣ ಜಾಧವ್, ಪಂಜು ಪೈಲ್ವನ್, ರವಿಗೌಡ, ಚೇತನ್, ಚಂದ್ರಕಾಂತ, ಮಂಜಣ್ಣ, ಅಜಯಕುಮಾರ ಇತರರು ಇದ್ದರು.
- - -(ಬಾಕ್ಸ್) * ದಾವಣಗೆರೆಯಲ್ಲಿ ಸಹಿ ಸಂಗ್ರಹ ಅಭಿಯಾನ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವವರೆಗೆ ಕಾಶಿಗೆ ಹಿಂತಿರುಗುವುದಿಲ್ಲವೆಂದು ಸಾವಿರಾರು ಸಾಧು ಸಂತರು ದೇಶಾದ್ಯಂತ ಸಂಚರಿಸುತ್ತಿದ್ದಾರೆ. ದಾವಣಗೆರೆಗೆ ಮೌನಿ ಬಾಬಾ ಆಗಮಿಸಿದ್ದು, ಗೋ ಮಾತೆಯ ಗೌರವದ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲೆಡೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅಭಿಯಾನ ಅಂಗವಾಗಿ ಕೇಂದ್ರದ ಮೇಲೆ ಒತ್ತಡ ತರುವ ಉದ್ದೇಶದಿಂದ ದಾವಣಗೆರೆಯಲ್ಲಿ ಸಹಿ ಸಂಗ್ರಹ ನಡೆಸಲಾಗುತ್ತಿದೆ. ಈಗಾಗಲೇ 20-30 ಸಾವಿರ ಜನರಿಂದ ಸಹಿ ಸಂಗ್ರಹಿಸಲಾಗಿದೆ. ಮನವಿ ಜೊತೆ ಸಂಗ್ರಹಿಸಿದ ಸಹಿಗಳ ಮಾಹಿತಿಯನ್ನೂ ಸಲ್ಲಿಸಲಿದ್ದೇವೆ ಎಂದು ರಾಜು ವೀರಣ್ಣ ತಿಳಿಸಿದರು.
- - --19ಕೆಡಿವಿಜಿ1: ದಾವಣಗೆರೆಯಲ್ಲಿ ಭಾನುವಾರ ಹಿಂದು ರಾಷ್ಟ್ರ ಸಮನ್ವಯ ಸಮಿತಿ ರಾಜು ವೀರಣ್ಣ, ಆಲೂರು ನಿಂಗರಾಜ, ಪರಶುರಾಮ ನಡುಮನಿ ಇತರರು ಸುದ್ದಿಗೋಷ್ಠಿಯಲ್ಲಿ ಸಹಿಯುಳ್ಳ ಮನವಿ ಪತ್ರ, ಅಭಿಯಾನದ ಕರಪತ್ರ ಪ್ರದರ್ಶಿಸಿದರು.