ನೀತಿ ಸಂಹಿತೆ ಉಲ್ಲಂಘಿಸದೇ ಪ್ರಚಾರ ಮಾಡಿ: ರಾಜೀವ್ ರತನ್

| Published : Apr 23 2024, 12:50 AM IST

ಸಾರಾಂಶ

ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪಾಲಿಸಬೇಕು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದಂತೆ ಚುನಾವಣಾ ಪ್ರಚಾರ ಕೈಗೊಳ್ಳಬೇಕು ಎಂದು ಭಾರತ ಚುನಾವಣಾ ಆಯೋಗದಿಂದ ಜಿಲ್ಲೆಗೆ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರಾಜಕೀಯ ಪಕ್ಷಗಳು ಮತ್ತು ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪಾಲಿಸಬೇಕು. ಚುನಾವಣಾ ಆಯೋಗವು ಪ್ರತಿಯೊಬ್ಬ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನ ಅವಕಾಶಗಳನ್ನು ನೀಡಿದ್ದು, ಈ ಕುರಿತಂತೆ ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ತಮಗೆ ಸಲ್ಲಿಸುವಂತೆ ತಿಳಿಸಿದರು.ಯಾವುದೇ ಚುನಾವಣಾ ಪ್ರಚಾರ ಸಭೆಗಳು, ಕಾರ್ಯಕ್ರಮಗಳು, ರ‍್ಯಾಲಿಗಳನ್ನು ನಡೆಸುವ ಪೂರ್ವದಲ್ಲಿ ಸೂಕ್ತ ಅನುಮತಿಯನ್ನು ಪಡೆದು ಕಾರ್ಯಕ್ರಮ ಆಯೋಜಿಸಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೋರುವ ಎಲ್ಲ ಅನುಮತಿಗಳನ್ನು ನಿಗದಿತ ಅವಧಿಯಲ್ಲಿ ನೀಡಲಾಗುತ್ತದೆ. ಧಾರ್ಮಿಕ ಸ್ಥಳಗಳು, ಶಾಲಾ ಆವರಣಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಬಾರದು. ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಬಾರದು. ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ತಮಗೆ ತಿಳಿಸಲಾಗುವುದು. ಆ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಚುನಾವಣಾ ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್ ಮಾತನಾಡಿ, ಚುನಾವಣಾ ಆಯೋಗ ಸೂಚಿಸಿರುವ ವೆಚ್ಚದ ಮಿತಿಯಲ್ಲಿಯೇ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹಾಗೂ ಕಾಲ ಕಾಲಕ್ಕೆ ವೆಚ್ಚ ವೀಕ್ಷಕರ ಕಚೇರಿಯನ್ನು ಸಂಪರ್ಕಿಸಿ ತಮ್ಮ ಲೆಕ್ಕಗಳ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಯಾವುದೇ ದೂರುಗಳನ್ನು ನೇರವಾಗಿ ಅಥವಾ ಸೀ ವಿಜಿಲ್ ಮೂಲಕ ಹಾಗೂ ಉಚಿತ ಸಹಾಯವಾಣಿ 1950ಕ್ಕೆ ಕರೆ ಮಾಡಿ ತಿಳಿಸಬಹುದು. ದೂರುಗಳಿಗೆ ತಕ್ಷಣದಲ್ಲಿ ಸ್ಪಂದಿಸುವುದಾಗಿ ಹಾಗೂ ಎಲ್ಲ ರೀತಿಯ ಅನುಮತಿಗಳನ್ನು ನಿಗದಿತ ಅವಧಿಯೊಳಗೆ ನೀಡಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ಕೇಬಲ್ ಟಿವಿಗಳಲ್ಲಿ ಜಾಹೀರಾತು ನೀಡುವ ಕುರಿತಂತೆ ಅನುಮತಿ ಕೋರಿ ಎಂಸಿಎಂಸಿಗೆ ಮಧ್ಯಾಹ್ನ 1 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಅದೇ ದಿನ ಅನುಮತಿ ನೀಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಇದ್ದರು.