ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳು ಜಾತಿ, ಜನಾಂಗ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ದ್ವೇಷದ ಭಾಷಣ, ವ್ಯಕ್ತಿಯ ಕುರಿತು ಅವಹೇಳನಕಾರಿ ಭಾಷಣ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಾಕೀತು ಮಾಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ-2024 ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿ ಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ವಸತಿ ಪ್ರದೇಶಗಳಲ್ಲಿ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಜಿಲ್ಲಾ ಮಟ್ಟದಲ್ಲಿ ಚುನಾವಣಾಧಿಕಾರಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿ ಬಳಿ ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುಮತಿಯನ್ನು ಪಡೆಯಬಹುದು. ಕಾರ್ಯಕ್ರಮ ನಡೆಸುವ 48 ಗಂಟೆಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ ಒಂದು ದಿನದ ಒಳಗೆ ಅನುಮತಿ ನೀಡಲಾಗುವುದು ಎಂದರು.ಚುನಾವಣೆ ಸಂದರ್ಭ ನೀತಿಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ಇಡಲು 26 ಕಡೆ ಮೂರು ಪಾಳಿಯಲ್ಲಿ ಚೆಕ್‍ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ತಂಡಗಳು ಕೆಲಸ ಮಾಡುತ್ತಿವೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1950 ಮೂಲಕ ಚುನಾ ವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಬಹುದು. ಅಭ್ಯರ್ಥಿಗಳು ಅಥವಾ ಸಾರ್ವಜನಿಕರು ತಮ್ಮ ಮೊಬೈಲಲ್ಲೇ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಆ ಮೂಲಕ ಚುನಾವಣಾ ಅಕ್ರಮಗಳ ಕುರಿತಾದ ಫೋಟೋ, ಆಡಿಯೋ, ವಿಡಿಯೋ ಅಪ್‍ಲೋಡ್ ಮಾಡುವ ಮೂಲಕ ದೂರನ್ನು ನೀಡಬಹುದು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ದೂರು ದಾಖಲಾದ ನಂತರ ಎಫ್‍ಎಸ್‍ಟಿ ತಂಡದವರು ದೂರಿನ ಕುರಿತು ಕ್ರಮ ವಹಿಸುವರು ಎಂದು ಹೇಳಿದರು.
ಅಭ್ಯರ್ಥಿಗಳು ತಮ್ಮ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ಇದ್ದಲ್ಲಿ ಈ ಕುರಿತು ಮೂರು ಬಾರಿ ಮುದ್ರಣ ಮತ್ತು ಟೀವಿ ಮಾಧ್ಯಮಗಳಲ್ಲಿ ಘೋಷಿಸಿ ಕೊಳ್ಳಬೇಕು ಎಂದು ತಿಳಿಸಿದರು.ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಪೂನಂ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ತಾವು ನೇಮಕವಾಗಿದ್ದು ಸರ್ಕ್ಯೂಟ್ ಹೌಸ್‍ನ ರೂಂ ಸಂಖ್ಯೆ 2ರಲ್ಲಿ ಲಭ್ಯವಿರುತ್ತೇನೆ. ಚುನಾವಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ 8147695215 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಅಭ್ಯರ್ಥಿಗಳು ಪೋಲಿಂಗ್ ಏಜೆಂಟ್ ಮತ್ತು ಎಲೆಕ್ಷನ್ ಏಜೆಂಟರನ್ನು ನೇಮಿಸಬೇಕು. ವಿವಿ ಪ್ಯಾಟ್ ರ್‍ಯಾಂಡಮೈಸೇಷನ್ ಬಗ್ಗೆ ತಮಗೆ ಮಾಹಿತಿ ನೀಡಲಾಗುವುದು. ಮತದಾನದ ನಂತರ ಸ್ಟ್ರಾಂಗ್ ರೂಂ ಹೊರಗಡೆ ಒಂದು ಶೆಡ್ ನಿರ್ಮಿಸಲಾಗುವುದು. ಅಲ್ಲಿ ಅಭ್ಯರ್ಥಿಗಳು ತಮ್ಮ ಕಡೆಯಿಂದ ಓರ್ವ ಅಭ್ಯರ್ಥಿಯನ್ನು ಸ್ಟ್ರಾಂಗ್ ರೂಂ ಅನ್ನು ವೀಕ್ಷಿಸಲು ನೇಮಿಸಬಹುದು. ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಅಭ್ಯರ್ಥಿಗಳು ಸುವಿಧಾ ತಂತ್ರಾಂಶಕ್ಕೆ ನೋಂದಣಿಯಾಗಿ ಆ ಮೂಲಕ ಅನುಮತಿಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.ವೆಚ್ಚ ವೀಕ್ಷಕ ಸರೋಜ್ ಕುಮಾರ್ ಬೆಹೆರಾ ಮಾತನಾಡಿ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಸಲು ಅಭ್ಯರ್ಥಿಗಳ ಸಹಕಾರ ಅಗತ್ಯವಾಗಿದೆ. ಅಭ್ಯರ್ಥಿ ಗಳ ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ನೆರವು ನೀಡಲು ವೆಚ್ಚ ವೀಕ್ಷಕರು ಲಭ್ಯವಿರಲಿದ್ದು, ಮೊ.ಸಂ.7760692479 , 8904703613 ದೂರವಾಣಿ ಕರೆ ಮೂಲಕವೂ ವೆಚ್ಚ ವೀಕ್ಷಕರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ವೆಚ್ಚ ನೋಡೆಲ್ ಅಧಿಕಾರಿ ಪ್ರಶಾಂತ್ ನಾಯಕ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ 95 ಲಕ್ಷ ರು. ಆಗಿದ್ದು, ಚುನಾವಣಾ ವೆಚ್ಚ ನಿರ್ವಹಿಸಲು ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ತೆರೆದು ಆ ಮೂಲಕವೇ ಚುನಾವಣಾ ವೆಚ್ಚ ನಿರ್ವಹಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್, ಲೋಕಸಭಾ ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಜರಿದ್ದರು.
ಜಾಹೀರಾತಿಗೆ ಮುನ್ನ ದೃಢೀಕರಣ ಕಡ್ಡಾಯಟಿವಿ, ಎಲೆಕ್ಟ್ರಾನಿಕ್, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ನೀಡುವ ಮುನ್ನ ಎಂಸಿಎಂಸಿ ಸಮಿತಿ ಮುಂದೆ ಜಾಹೀರಾತು ವಿಷಯವನ್ನು ನೀಡಿ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹಿರಾತು ಪ್ರಕಟಿಸಲು ಮತದಾನ ಮುಕ್ತಾಯಕ್ಕೆ ನಿಗದಿಯಾದ ಸಮಯಕ್ಕಿಂತ 48 ಗಂಟೆ ಮುಂಚಿತವಾಗಿ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ. ಕರಪತ್ರಗಳನ್ನು ಪ್ರಕಟಿಸುವ ಅಭ್ಯರ್ಥಿಗಳು ಮುದ್ರಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆಯನ್ನು ಘೋಷಿಸಿ ವಿತರಣೆಗೆ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))