ಅಡಕೆಯ ಸಮಗ್ರ ಸಂಶೋಧನೆ ನಡೆಸಲು ಬಜೆಟ್‌ನಲ್ಲಿ ನಿಧಿ ಹಂಚಿಕೆ: ಕೇಂದ್ರಕ್ಕೆ ಕ್ಯಾಂಪ್ಕೊ ಮನವಿ

| Published : Dec 03 2024, 12:30 AM IST / Updated: Dec 03 2024, 12:45 PM IST

Arecanut
ಅಡಕೆಯ ಸಮಗ್ರ ಸಂಶೋಧನೆ ನಡೆಸಲು ಬಜೆಟ್‌ನಲ್ಲಿ ನಿಧಿ ಹಂಚಿಕೆ: ಕೇಂದ್ರಕ್ಕೆ ಕ್ಯಾಂಪ್ಕೊ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆಯ ಸುರಕ್ಷತೆ ಮತ್ತು ಅದರ ಕ್ಯಾನ್ಸರ್‌ ರೋಗ ಶಮನಗೊಳಿಸುವ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಪತ್ರ 

 ಮಂಗಳೂರು : ಅಡಕೆಯ ಸುರಕ್ಷತೆ ಮತ್ತು ಅದರ ಕ್ಯಾನ್ಸರ್‌ ರೋಗ ಶಮನಗೊಳಿಸುವ ಆಯುರ್ವೇದೀಯ ಗುಣಗಳ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಮುಂಬರುವ ಬಜೆಟ್‌ನಲ್ಲಿ ನಿಧಿ ಹಂಚಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಡಕೆ ಕೃಷಿ ಲಕ್ಷಾಂತರ ಬೆಳೆಗಾರರಿಗೆ ಜೀವನಾಧಾರವಾಗಿದೆ. ಭಾರತದ ಸಾಂಸ್ಕೃತಿಕ ಜನಜೀವನದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಡಕೆಯು ಮಹತ್ತರ ಪಾತ್ರ ವಹಿಸಿರುವ ಕುರಿತು ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಸುಮಾರು 9.55 ಲಕ್ಷ ಹೆಕ್ಟೇರ್‌ಗೆ ಅಡಕೆ ಕೃಷಿ ವಿಸ್ತರಿಸಿದ್ದು, ವಾರ್ಷಿಕವಾಗಿ 14ರಿಂದ 18 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಅಡಕೆ ಉತ್ಪಾದನೆಯಾಗುತ್ತಿದೆ. ಕೇಂದ್ರ ಸರ್ಕಾರ ಜಿಎಸ್ಟಿ ಪದ್ಧತಿ ಜಾರಿಗೊಳಿಸಿದಂದಿನಿಂದ ಈವರೆಗೆ ಕ್ಯಾಂಪ್ಕೊ ಒಂದೇ ಸಂಸ್ಥೆ ಸುಮಾರು 650 ಕೋಟಿ ರು. ತೆರಿಗೆ ಪಾವತಿ ಮಾಡಿರುವುದರ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಅಡಕೆಯನ್ನು ಕ್ಯಾನ್ಸರ್‌ ಕಾರಕವೆಂದು ವರ್ಗೀಕರಿಸಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಅಡಕೆಯನ್ನು ಗುಟ್ಕಾ ಮತ್ತು ತಂಬಾಕಿನ ಜತೆ ಬಳಸುತ್ತಿರುವ ಕಾರಣದಿಂದ ಅದನ್ನು ಕ್ಯಾನ್ಸರ್‌ ಕಾರಕವೆಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣ ನ್ಯಾಯೋಚಿತವಾಗಿಲ್ಲವೆಂದು ದಾಖಲೆ ಸಮೇತ ಸಾಬೀತುಪಡಿಸಲು ಕ್ಯಾಂಪ್ಕೊ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿರುವ ಸಂಶೋಧನಾ ವರದಿಗಳನ್ನು ಸಲ್ಲಿಸಿದೆ. ಎಲ್ಲ ವರದಿಗಳೂ ಅಡಕೆಯ ಉಪಯೋಗ ಕ್ಯಾನ್ಸರ್‌ ಕಾರಕವಲ್ಲ, ಬದಲಾಗಿ ಕ್ಯಾನ್ಸರ್‌ನ್ನು ಶಮನಗೊಳಿಸುವ ಗುಣಗಳನ್ನು ಹೊಂದಿರುವ ಬಗ್ಗೆ ರುಜುವಾತುಪಡಿಸಿವೆ.

ಭಾರತಲ್ಲಿರುವ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಐಸಿಎಂಆರ್, ಐಸಿಎಆರ್, ಎಐಐಎಂಎಸ್‌ ಮತ್ತು ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ಗಳು ಸಂಯುಕ್ತವಾಗಿ ಅಥವಾ ಪರಸ್ಪರ ಸಹಕಾರದೊಂದಿಗೆ ಅಡಕೆಯನ್ನು ನಿರ್ದಿಷ್ಟವಾಗಿ ಅದರ ಮೂಲ ರೂಪದಲ್ಲೇ ಸಂಶೋಧನೆ ನಡೆಸುವ ಅಗತ್ಯತೆ ಕುರಿತು ಕ್ಯಾಂಪ್ಕೊ ಪ್ರಸ್ತಾವನೆ ಸಲ್ಲಿಸಿದೆ. ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್‌ ಅವರನ್ನು ಚೆನೈನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಡಾ. ಸೌಮ್ಯ ಅವರು ಕ್ಯಾಂಪ್ಕೊದ ಪ್ರಸ್ತಾವನೆಯನ್ನುವಿಶ್ಲೇಷಿಸಿ ಡಬ್ಲ್ಯೂಎಚ್‌ಒ ಅಡಕೆಯ ವರ್ಗೀಕರಣವನ್ನು ಪರಾಮರ್ಶಿಸುವ ಅಗತ್ಯತೆ ಬಗ್ಗೆ ಸಹಮತ ಸೂಚಿಸಿದ್ದಾರೆ.

ಅಡಕೆಯ ಉಪಯೋಗದ ಬಗ್ಗೆ ನ್ಯಾಯೋಚಿತ ಮತ್ತು ವಸ್ತುನಿಷ್ಠ ಸಂಶೋಧನೆ ನಡೆಸಿ, ಅದರ ಔಷಧೀಯ ಗುಣಗಳ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ದಾಖಲೀಕರಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಸಬೇಕು. ಆಗ ಲಕ್ಷಾಂತರ ಬೆಳೆಗಾರರ ಬದುಕಿಗೆ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದಂತಾಗುತ್ತದೆ. ಸಂಶೋಧನೆಗೆ ಬೇಕಾದ ನಿಧಿಯನ್ನು ಮುಂದಿನ ಬಜೆಟ್‌ನಲ್ಲಿ ಹಂಚಿಕೆ ಮಾಡುವಂತೆ ಎಲ್ಲ ರೈತರ ಪರವಾಗಿ ಕಿಶೋರ್‌ ಕುಮಾರ್‌ ಕೊಡ್ಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.