ಸಾರಾಂಶ
ವಿಶ್ವ ಆರೋಗ್ಯ ಸಂಸ್ಥೆಯು ಅಡಕೆ ಕ್ಯಾನ್ಸರ್ ಕಾರಕವೆಂದು ಪರಿಗಣಿಸಿರುವುದು ಅಡಕೆಯನ್ನೇ ಜೀವನಾಧಾರವಾಗಿ ನಂಬಿರುವ ರೈತರ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದ ನಿಯೋಗ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರನ್ನು ಚೆನ್ನೈಯಲ್ಲಿ ಅ.25ರಂದು ಭೇಟಿ ಮಾಡಿದರು.ವಿಶ್ವ ಆರೋಗ್ಯ ಸಂಸ್ಥೆಯು ಅಡಕೆ ಕ್ಯಾನ್ಸರ್ ಕಾರಕವೆಂದು ಪರಿಗಣಿಸಿರುವುದು ಅಡಕೆಯನ್ನೇ ಜೀವನಾಧಾರವಾಗಿ ನಂಬಿರುವ ರೈತರ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.
ನಿಯೋಗದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ ಹಾಗೂ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೇಶವ ಭಟ್ ಭಾಗವಹಿಸಿದ್ದರು.ಅಡಕೆಯ ಉಪಯೋಗವು ಕ್ಯಾನ್ಸರ್‌ಕಾರಕವಲ್ಲ, ಬದಲಾಗಿ ಶಮನಕಾರಕ ಗುಣಗಳನ್ನು ಹೊಂದಿರುವುದನ್ನು ಸಾಬೀತುಪಡಿಸುವ ಸುಮಾರು 20ಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ಪ್ರಸ್ತುತಪಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿಗೆ ಮನವರಿಕೆ ಮಾಡಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಪಡೆದು, ಇಂತಹ ವಿಶ್ವಾಸಾರ್ಹ ದಾಖಲೆಗಳನ್ನು ಇಂಟರ್ ನ್ಯಾಶನಲ್ ಏಜೆನ್ಸಿ ಫಾರ್ ಕ್ಯಾನ್ಸರ್ ರಿಸರ್ಚ್ ಮತ್ತು ವರ್ಲ್ಡ್ ಹೆಲ್ತ್ ಆರ್ಗನೈಸೇಷನ್‌ನಲ್ಲಿ ಮಂಡಿಸಿ ಅಡಕೆಯ ಬಗೆಗಿನ ತಪ್ಪು ತಿಳುವಳಿಕೆಯನ್ನು ಮರು ಪರಿಶೀಲಿಸಲು ಭಾರತ ಸರ್ಕಾರದ ಮೂಲಕ ಒತ್ತಡ ಹೇರುವಂತೆ ಸಲಹೆ ನೀಡಿದ್ದಾರೆ.
ರೈತರ ಸಮಸ್ಯೆ ನಿವಾರಣೆಗೆ ಕ್ಯಾಂಪ್ಕೊದ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಡಾ.ಸೌಮ್ಯ ಸ್ವಾಮಿನಾಥನ್, ಈ ಕುರಿತು ಕೇಂದ್ರ ಕೃಷಿ ಹಾಗೂ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವಾಲಯಕ್ಕೆ ಅಭಿಪ್ರಾಯ ನೀಡುವುದಾಗಿ ಭರವಸೆ ನೀಡಿದರು.