ಅಡಕೆ ಬೆಳೆಗಾರರ ಕರ್ನಾಟಕ-ಕೇರಳದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಡಕೆ ಖರೀದಿ ಮತ್ತು ಮಾರಾಟವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಅಡಕೆ ಬೆಳೆಗಾರರ ಕರ್ನಾಟಕ-ಕೇರಳದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಡಕೆ ಖರೀದಿ ಮತ್ತು ಮಾರಾಟವನ್ನು ರಾಷ್ಟ್ರವ್ಯಾಪಿ ವಿಸ್ತರಿಸಲು ನಿರ್ಧರಿಸಿದೆ. ಮಂಗಳೂರು ಹೊರವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ ಕ್ಯಾಂಪ್ಕೋ 52ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಈ ನಿರ್ಧಾರ ಪ್ರಕಟಿಸಿದರು. ಇದೇ ವೇಳೆ ಈ ಬಾರಿ ಅಡಕೆ ಬೆಳೆಗಾರ ಸದಸ್ಯರಿಗೆ ಶೇ.14 ಲಾಭಾಂಶ ನೀಡಲು ಸಮ್ಮತಿಸಲಾಯಿತು.ಜಾಗತಿಕ ಮಾರುಕಟ್ಟೆ ಜೊತೆಗೆ ಕ್ಯಾಂಪ್ಕೋ ಸ್ಪರ್ಧಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ವಹಿವಾಟನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ. ನೇರ ಖರೀದಿ ಮತ್ತು ಮಾರಾಟ ಸಲುವಾಗಿ ದೇಶವ್ಯಾಪಿ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಇಲ್ಲಿನ ಕೃಷಿ ಉತ್ಪನ್ನ ಮಾರಾಟ ಮಾತ್ರವಲ್ಲ, ಅಲ್ಲಿನ ಕೃಷಿ ಉತ್ಪನ್ನಗಳನ್ನು ಖರೀದಿಸಿ ಇಲ್ಲಿ ಕೂಡ ಮಾರಾಟ ಮಾಡುವ ಚಿಂತನೆ ಇದೆ ಎಂದರು.
ಮಂಗ್ಳೂರಲ್ಲಿ ಜಾಗತಿಕ ಸಮ್ಮೇಳನ ಸಿದ್ಧತೆ:ಇದಕ್ಕೆ ಪೂರಕವಾಗಿ 2027ರ ಜನವರಿಯಲ್ಲಿ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಡಕೆ ಸಮ್ಮೇಳನ ಆಯೋಜಿಸಲಾಗುವುದು. ಕೃಷಿಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಮರ್ಮುಡಿ ನೇತೃತ್ವದಲ್ಲಿ ಸಮ್ಮೇಳನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳು ಆರಂಭಗೊಂಡಿವೆ. ಸಿಪಿಸಿಆರ್‌ಐ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಲ್ಲಿ ಸಮ್ಮೇಳನ ನಡೆಯಲಿದೆ. ಆಹಾರ ಸುರಕ್ಷತೆ, ಬೆಳವಣಿಗೆ, ಸಂಶೋಧನೆ, ಸುಸ್ಥಿರತೆ, ಮಾರುಕಟ್ಟೆ ಮುಂತಾದ ವಿಚಾರಗಳು ಸಮ್ಮೇಳನದಲ್ಲಿ ವಿಸ್ತೃತ ಚರ್ಚೆಗೆ ಒಳಪಡಲಿದೆ ಎಂದರು.
ಅಡಕೆ ರಫ್ತು ಘಟಕ ಸ್ಥಾಪನೆ:ಅಡಕೆ ಬೆಳೆಗಾರರು ನಿರಂತರ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಲ್ಲದೆ, ಕ್ಯಾಂಪ್ಕೋ ಜೊತೆ ಹೆಚ್ಚಿನ ವ್ಯವಹಾರ ನಡೆಸಬೇಕು ಎಂಬುದು ನಮ್ಮ ಅಪೇಕ್ಷೆ. ದುಬೈ, ದೆಹಲಿ ಮತ್ತಿತರರ ಕಡೆಗಳಲ್ಲಿ ಅಡಕೆಯನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ಬಗ್ಗೆ ಬೇಡಿಕೆ ಇದೆ. ಅದಕ್ಕಾಗಿ ಮಂಗಳೂರಲ್ಲಿ ಅಡಕೆಯ ರಫ್ತು ಘಟಕ ತೆರೆಯಲು ನಿರ್ಧರಿಸಲಾಗಿದೆ ಎಂದರು.
ಇತರೆ ಉತ್ಪನ್ನಗಳ ಖರೀದಿ:ಅಡಕೆ, ಕೋಕೋ, ರಬ್ಬರ್, ಕಾಳುಮೆಣಸು ಮಾದರಿಯಲ್ಲಿ ಹಲಸು, ಗೇರುಬೀಜ ಖರೀದಿ ಬಗ್ಗೆ ಯೋಚಿಸಲಾಗುವುದು. ಕ್ಯಾಂಪ್ಕೋ ಸ್ಥಾಪಕ ದಿ.ವಾರಣಾಸಿ ಸುಬ್ರಾಯ ಭಟ್ಟರಿಗೆ ‘ಪದ್ಮಶ್ರೀ’ ಪ್ರಶಸ್ತಿ ದೊರಕಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು. ಇನ್ನಷ್ಟು ಅಡಕೆ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ಧಾರ, ಯುವ ಪೀಳಿಗೆಗೆ ಉಪಯುಕ್ತವಾಗಲು, ಸಹಕಾರಿ ರಂಗದಲ್ಲಿ ನಾಯಕತ್ವ ಬೆಳೆಸಲು ವೃತ್ತಿಪರ ಕೋರ್ಸ್ ಆರಂಭಿಸಲು ಯೋಚನೆ, ಕಸ್ತೂರಿ ರಂಗನ್ ವರದಿ ಜಾರಿಯ ಸಾಧಕ ಬಾಧಕಗಳ ವಿಚಾರದಲ್ಲಿ ಬೆಳೆಗಾರರ ಹಿತ ಕಾಯಲು ಸಂಸ್ಥೆ ಬದ್ಧವಾಗಿದೆ, ಅಡಕೆ ತೋಟಗಳಿಗೆ ರೋಗ ಬಾಧೆ, ವನ್ಯಜೀವಿಗಳ ಹಾಳಿ ತಡೆದು ಬೆಳೆಗಾರರ ರಕ್ಷಣೆಗೆ ಸಿದ್ಧ ಎಂದರು.
ಪ್ರೋತ್ಸಾಹಧನ ಬೇಡಿಕೆ:ಅಡಕೆ ಧಾರಣೆ ಹೆಚ್ಚಳ ಸಂದರ್ಭ ಕೇವಲ ಲಾಭಾಂಶ ಮಾತ್ರವಲ್ಲ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆಯೂ ಬೈಲಾದಲ್ಲಿ ಸೇರಿಸಬೇಕು, ಯಶಸ್ವಿ ಮಾದರಿಯಲ್ಲಿ ಎಲ್ಲ ಸದಸ್ಯ ಬೆಳೆಗಾರರಿಗೆ ವಿಮಾ ಸೌಲಭ್ಯ ಸುಲಭದಲ್ಲಿ ದೊರಕುವಂತೆ ಕ್ಯಾಂಪ್ಕೋ ಮಾಡಬೇಕು. ಅಡಕೆ ಸಂಶೋಧನೆಗೆ ಒತ್ತು ನೀಡಬೇಕು. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಪ್ರೋತ್ಸಾಹ ನೀಡಬೇಕು. ಅಡಕೆ ಮಾತ್ರವಲ್ಲ ಕೋಕೋ ಬೆಳೆಗಾರರಿಗೂ ಕ್ಯಾಂಪ್ಕೋ ಕಲ್ಯಾಣ ಯೋಜನೆಗಳನ್ನು ಅನ್ವಯಿಸಬೇಕು. ಪವನ ವಿದ್ಯುತ್ ಅಳವಡಿಕೆ ಮೂಲಕ ಕ್ಯಾಂಪ್ಕೋ ಸಂಪೂರ್ಣ ವಿದ್ಯುತ್ ಸ್ವಾವಲಂಬಿಯಾಗಬೇಕು. ಆನ್‌ಲೈನ್ ಮೂಲಕ ಬೆಳೆಗಾರ ಸದಸ್ಯರ ಸಭೆ ನಡೆಸಲು ಅವಕಾಶ ಕಲ್ಪಿಸಬೇಕು ಇತ್ಯಾದಿ ಬೇಡಿಕೆ ಸದಸ್ಯ ಬೆಳೆಗಾರರಿಂದ ವ್ಯಕ್ತವಾಯಿತು.
ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕರಾದ ದಯಾನಂದ ಹೆಗ್ಡೆ, ಮಹೇಶ್ ಚೌಟ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ರಾಘವೇಂದ್ರ ಎಚ್.ಎಂ., ಸತೀಶ್ಚಂದ್ರ ಭಂಡಾರಿ, ತೀರ್ಥರಾಮ ಎ.ವಿ., ಪುರುಷೋತ್ತಮ ಭಟ್, ವೆಂಕಟರಮಣ ಭಟ್, ವಿವೇಕಾನಂದ ಗೌಡ, ಸದಾನಂದ ಶೆಟ್ಟಿ, ಮುರಳೀಕೃಷ್ಣ ಕೆ.ಎನ್., ಗಣೇಶ್ ಕುಮಾರ್, ಮಾಲಿನಿ ಪ್ರಸಾದ್, ಸೌಮ್ಯ ಪ್ರಕಾಶ್, ವಿಶ್ವನಾಥ್ ಈಶ್ವರ ಹೆಗಡೆ, ಗಣೇಶ್, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಜನರಲ್ ಮೆನೇಜರ್ ರೇಶ್ಮಾ ಮಲ್ಯ, ಡಿಜಿಎಂ ಗೋವಿಂದ ಭಟ್ ಇದ್ದರು. ಕ್ಯಾಂಪ್ಕೋ ರೈತರ ಸೆಲ್ಫಿ ಕಾರ್ನರ್!‘ಐ ಆ್ಯಮ್ ಪ್ರೌವ್ಡ್ ಕ್ಯಾಂಪ್ಕೋ ಫಾರ್ಮರ್’ ಹೆಸರಿನಲ್ಲಿ ಸೆಲ್ಫಿ ಕಾರ್ನರ್ ಈ ಬಾರಿಯ ಮಹಾಸಭೆಗೆ ಆಗಮಿಸಿದವರ ಸೆಳೆಯುತ್ತಿದ್ದುದು ವಿಶೇಷವಾಗಿತ್ತು.
ಹೆದ್ದಾರಿಯಿಂದ ಅಡ್ಯಾರ್ ಗಾರ್ಡನ್ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಈ ಸೆಲ್ಫಿ ಕಾರ್ನರ್ ರಚಿಸಲಾಗಿತ್ತು. ಅದರಲ್ಲಿ ‘ನಾನು ಕ್ಯಾಂಪ್ಕೋ ರೈತ ಎನ್ನಲು ಹೆಮ್ಮೆಯಾಗುತ್ತಿದೆ’ ಎಂಬ ಆಂಗ್ಲ ವಾಕ್ಯವನ್ನು ರಚಿಸಿದ್ದು, ಎಲ್ಲರ ಗಮನ ಸೆಳೆಯುತ್ತಿತ್ತು. ಇದರ ಸಮೀಪವೇ ಕೃಷಿಗೆ ಪೂರಕ ಸಲಕರಣೆಗಳು, ಅಡಕೆಯ ಉತ್ಪನ್ನಗಳು, ಕ್ಯಾಂಪ್ಕೋ ಉತ್ಪನ್ನಗಳ ಪ್ರದರ್ಶನ, ಮಾರಾಟ ಏರ್ಪಡಿಸಲಾಗಿತ್ತು.