ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಸಹಕಾರಿ: ಪ್ರೊ. ಬೋರಲಿಂಗಯ್ಯ

| Published : May 01 2024, 01:28 AM IST

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಸಹಕಾರಿ: ಪ್ರೊ. ಬೋರಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಏಕಾಂಗಿತನ, ಆತ್ಮವಿಶ್ವಾಸದ ಕೊರತೆ, ನಕರಾತ್ಮಕ ಚಿಂತನೆಗಳು ಹೆಚ್ಚಾಗುತ್ತಿವೆ. ಇತರರೊಂದಿಗೆ ಬೆರೆತು, ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮ ವಿಶ್ವಾಸ ಮತ್ತು ಉತ್ತಮ ಆರೋಗ್ಯ ಹೊಂದಲು ಶಿಬಿರಗಳು ಸಹಕಾರಿಯಾಗಲಿವೆ

ರಾಮನಗರ: ಮಕ್ಕಳು ರಜೆ ಸಮಯದಲ್ಲಿ ಮನೆಯಲ್ಲಿಯೇ ಮೊಬೈಲ್ ಗೀಳಿಗೆ ಬಲಿಯಾಗುತ್ತಿದ್ದು, ಅವರನ್ನು ವಿಕಸನ ಶಿಬಿರಗಳಿಗೆ ಕಳುಹಿಸುವುದರಿಂದ, ಅವರು ಇತರೆ ಮಕ್ಕಳೊಂದಿಗೆ ಬೆರೆಯುವ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ನಾಡೋಜ ಎಚ್.ಎಲ್. ನಾಗೇಗೌಡ ಕಲಾ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಗ್ರಾಮೀಣ ವಿಕಸನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಲ್ಲಿ ಏಕಾಂಗಿತನ, ಆತ್ಮವಿಶ್ವಾಸದ ಕೊರತೆ, ನಕರಾತ್ಮಕ ಚಿಂತನೆಗಳು ಹೆಚ್ಚಾಗುತ್ತಿವೆ. ಇತರರೊಂದಿಗೆ ಬೆರೆತು, ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಆತ್ಮ ವಿಶ್ವಾಸ ಮತ್ತು ಉತ್ತಮ ಆರೋಗ್ಯ ಹೊಂದಲು ಶಿಬಿರಗಳು ಸಹಕಾರಿಯಾಗಲಿವೆ ಎಂದರು.

ಶಿಬಿರಗಳ ಮೂಲಕ ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ದೊರೆಯುವುದರ ಜೊತೆಗೆ ಮಕ್ಕಳು ವಿನೂತನ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಮನೋ ವಿಕಾಸ ಹೊಂದಿ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ. ಈ ಮೂಲಕ ಬೇಸಿಗೆ ರಜೆಯ ಸದುಪಯೋಗವಾಗಲಿದೆ ಎಂದು ತಿಳಿಸಿದರು.

ಶಿಬಿರಗಳಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ಕಲೆಗಳ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಕ್ಕಳಲ್ಲಿ ಜೀವನ ಪ್ರೀತಿ ಬೆಳೆಸಲು ಶಿಬಿರಗಳು ಅತ್ಯಗತ್ಯವಾಗಿವೆ ಎಂದು ಹೇಳಿದರು.

ಶಿಬಿರದ ಸಂಚಾಲಕ ಎಸ್. ಪ್ರದೀಪ್ ಮಾತನಾಡಿ, ಶಿಬಿರ ಮೇ.10ರವರೆಗೆ ನಡೆಯಲಿದೆ. ಶಿಬಿರದಲ್ಲಿ ಗ್ರಾಮೀಣ ಸಂಸ್ಕೃತಿಯ ಅರಿವು, ಜನಪದ ಕಥಾ ಕಲರವ, ಜನಪದ ಕಲೆಗಳ ತರಬೇತಿ, ಜನಪದ ಗೀತಗಾಯನ ತರಬೇತಿ, ಭಾಷಣ ಕಲೆ, ಅಭಿನಯ ತರಬೇತಿ, ಗ್ರಾಮೀಣ ಆಟಗಳ ಕಲಿಕೆ, ಚಿತ್ರಕಲಾ ಸ್ಪರ್ಧೆ, ಚಿಣ್ಣರ ಸಂತೆ ಸೇರಿದಂತೆ ಹಲವು ಬಗೆಯ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ ಎಂದರು.

ಜಾನಪದ ಲೋಕದ ಸರಸವಾಣಿ, ಡಾ.ಯು.ಎಂ. ರವಿ, ಡಾ.ಕೆ.ಎಸ್. ಸಂದೀಪ್ ಮತ್ತಿತರರು ಹಾಜರಿದ್ದರು.