ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಕುಣಿಗಲ್ ರಸ್ತೆಯಲ್ಲಿರುವ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಶ್ರೀ ಸಿದ್ಧಾರ್ಥ ಕೈಗಾರಿಕಾ ತರಬೇತಿ ಕೆಂದ್ರದಲ್ಲಿ ಅನುಭವಿ ಹಾಗೂ ಕೌಶಲ್ಯ ಭರಿತ ಉದ್ಯೋಗಿಗಳಿಗಾಗಿ ಕ್ಯಾಂಪಸ್ ಡ್ರೈವ್ ಮೇಳ ಯಶಸ್ವಿಯಾಗಿ ನಡೆಯಿತು. ಸಂದರ್ಶನಕ್ಕೆ ಹಾಜರಾದ 2820 ಮಂದಿಯಲ್ಲಿ 324 ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಯಿತು. 26ಕ್ಕೂ ಹೆಚ್ಚು ಕಂಪನಿಗಳು ನಡೆಸಿದ ಉದ್ಯೋಗ ಮೇಳದಲ್ಲಿ 1215 ಮಂದಿ ಉದ್ಯೋಗಿಗಳಾಗಿ ಆಯ್ಕೆಯಾಗಿದ್ದಾರೆ.ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದಲ್ಲಿ ಸರ್ಕಾರಿ ಕೈಗಾರಿಕಾ ಸಂಸ್ಥೆ ಸಹಯೋಗದೊಂದಿಗೆ ನಡೆದ ಉದ್ಯೋಗ ಮೇಳವನ್ನು ಶ್ರೀ ಸಿದ್ಧಾರ್ಥ ಕೈಗಾರಿಕಾ ಸಂಸ್ಥೆಯ ಆಡಳಿತ ಅಧಿಕಾರಿ ಬಿ. ನಂಜುಂಡಪ್ಪ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಐಟಿಐ ಮಾಡಿದ ವಿದ್ಯಾರ್ಥಿಗಳಿಗೆ ಕಲಿಯುವ ಹಂತದಲ್ಲಿ ಉದ್ಯೋಗಗಳನ್ನ ದೊರಕಿಸಿಕೊಡುವ ಸಲುವಾಗಿ ಮತ್ತು ಸೃಜನಾತ್ಮಕ ಉದ್ಯೋಗಗಳನ್ನು ಪರಿಚಯಿಸುವ ಸಲುವಾಗಿ ನಮ್ಮ ಕ್ಯಾಂಪಸ್ ನಲ್ಲಿ ಅಪ್ರೆಂಟಿಸ್ ಡ್ರೈವ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು.ವಿದ್ಯಾರ್ಥಿಗಳಿಗೆ ಕೇವಲ ಬೋಧನೆ, ಪಠ್ಯ ವಸ್ತು ವಿಷಯದಿಂದಾಗಿ ಉದ್ಯೋಗಗಳು ಲಭಿಸುವುದಿಲ್ಲ. ಬದಲಾಗಿ ವಿವಿಧ ಕೈಗಾರಿಕಾ ಸಂಸ್ಥೆಗಳ ಒಡಂಬಡಿಕೆ ಹಾಗೂ ಕಾರ್ಯಗಾರಗಳಿಂದಾಗಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಉದ್ಯೋಗ ದೊರಕಿಸಿ ಕೊಡಬಹುದಾಗಿದೆ. ತರಬೇತಿ ಪಡೆದ ವಿದ್ಯಾರ್ಥಿಗಳ ವಯೋಮಿತಿಯು ಕೂಡ ಹೆಚ್ಚುತ್ತ ಹೋಗುತ್ತಿದ್ದು, ಉದ್ಯೋಗವು ಸಿಗದೇ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರಿ ಕೆಲಸಗಳು ಇಂದಿನ ಯುವಕರಿಗೆ ಕಬ್ಬಿಣದ ಕಡಲೆಯಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಕೈಗಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗ ಸೃಜನೆ ಮತ್ತು ಕ್ಯಾಂಪಸ್ ಡ್ರೈವ್ ನಂತಹ ಕಾರ್ಯಕ್ರಮಗಳ ಮೂಲಕ ಉದ್ಯೋಗ ದೊರಕಿಸಿ ಕೊಡುವುದು ನಮ್ಮ ಸಂಸ್ಥೆಯ ಪರಮ ಉದ್ದೇಶವಾಗಿದೆ ಎಂದು ಬಿ ನಂಜುಂಡಪ್ಪ ನುಡಿದರು.
ತರಬೇತಿ ಹಾಗೂ ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟಮಾರಯ್ಯ ಮಾತನಾಡಿ, ಕೈಗಾರಿಕೆಗಳಲ್ಲಿರುವ ಶಿಸ್ತುಬದ್ಧತೆ ನಿಯಮಗಳು ಸೇರಿ ಇತರೆ ಸೃಜನಾತ್ಮಕ ಕೆಲಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವುದರಿಂದ ಉದ್ಯೋಗಕ್ಕೆ ತೆರಳುವುದು ಅತಿ ಸುಲಭ. ಉದ್ಯೋಗದಾತರು ವಿದ್ಯಾರ್ಥಿಗಳ ಕಾರ್ಯ, ಕೌಶಲ್ಯ ಗುರುತಿಸಿ ಮತ್ತು ಅವರ ಕಾರ್ಯಕ್ಷಮತೆಗೆ ಅನುಗುಣವಾಗಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.ಈ ಕ್ಯಾಂಪಸ್ ಡ್ರೈವ್‌ನಲ್ಲಿ ಜಾನ್ಸನ್ ಲಿಫ್ಟ್ ಲಿಮಿಟೆಡ್, ಅನಿತಾ ಟೆಲಿಬರ್ಗ್, ಮಹೇಂದ್ರ ಹಿಟಾಚಿ, ಸಾಕೇತ್ ಆಟೋಮೊಬೈಲ್, ಹ್ಯಾವೆಲ್ಸ್ ಸೇರಿ ಸುಮಾರು 26ಕ್ಕೂ ಹೆಚ್ಚು ವಿವಿಧ ಕೈಗಾರಿಕಾ ಕಂಪನಿಗಳು ಹಾಗೂ ಜಿಲ್ಲೆಯ ಹಲವು ಕೈಗಾರಿಕಾ ತರಬೇತಿ ಸಂಸ್ಥೆಗಳು ಭಾಗವಹಿಸಿದ್ದವು. ವಿವಿಧ ಕಂಪನಿಗಳ ತರಬೇತುದಾರರು ಕೈಗಾರಿಕಾ ತರಬೇತಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಸಲುವಾಗಿ ಉಪನ್ಯಾಸ ನೀಡಿದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕಿರಣ್ ಕುಮಾರ್, ನೋಡಲ್ ಅಧಿಕಾರಿ ಟಿ.ಕೆ.ಕೆಂಪಯ್ಯ, ಸಿದ್ಧಾರ್ಥ ಕೈಗಾರಿಕಾ ತರಬೇತಿ ಸಂಸ್ಥೆಯ ಸಹ ಆಡಳಿತ ಅಧಿಕಾರಿ ಖಲಂದರ್ ಪಾಷ, ಸಿದ್ಧಾರ್ಥ ಐಟಿಐ ಕಾಲೇಜಿನ ಪ್ರಾಚಾರ್ಯ ಗೋವಿಂದರಾಜು, ತರಬೇತಿ ಅಧಿಕಾರಿ ಟಿ ರವೀಶ್ ಸೇರಿ ಕೈಗಾರಿಕಾ ಪ್ರತಿನಿಧಿಗಳು ಹಾಗೂ ತರಬೇತಿದಾರರು ಉಪಸ್ಥಿತರಿದ್ದರು.