ಸಾರಾಂಶ
ಕಳೆದೆರಡು ದಿನಗಳಿಂದ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಬಿರುಸಿನ ಮತಯಾಚನೆ ನಡೆಸುತ್ತಿರುವ ರಘುಪತಿ ಭಟ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೈವರ ದರ್ಶನ ಪಡೆದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ನಾನು ಮಾಡಿದ ಸೇವಾ ಕಾರ್ಯಗಳಿಂದ ಜನ ನನಗೆ ಅವರ ಮನಸ್ಸಿನಲ್ಲಿ ಸ್ಥಾನ ನೀಡಿದ್ದಾರೆ. ಇಂದು ನಾನು ಹೋದ ಎಲ್ಲ ಭಾಗಗಳಲ್ಲಿಯೂ ಜನ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಜನರ ಮನಸ್ಸಿನಿಂದ ನನ್ನನ್ನು ಉಚ್ಛಾಟಿಸಲು ಸಾಧ್ಯವಿಲ್ಲ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಹೇಳಿದರು.ಉಡುಪಿ ಹಾಗೂ ಕುಂದಾಪುರ ವಕೀಲರ ಸಂಘ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು, ಕಂಪನಿಗಳಲ್ಲಿ ಪದವೀಧರ ಮತದಾರರ ಸಭೆ ನಡೆಸಿ ಮತ ಯಾಚಿಸಿದರು.
ಶಾಸಕನಾಗಿದ್ದಾಗ ಎಲ್ಲಾ ವರ್ಗದ ಜನತೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಹಿಜಾಬ್ ವಿವಾದ ಬಂದಾಗ ಶಾಲೆಯ ಒಳಗೆ ಸಮಾನತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಮವಸ್ತ್ರಕ್ಕೆ ಆದ್ಯತೆ ನೀಡಲು ಒತ್ತಾಯಿಸಿದ್ದೆ. ಆ ವಿಚಾರದಲ್ಲಿ ನನ್ನನ್ನು ಇಂದು ವ್ಯಂಗ್ಯ ಮಾಡಿದವರಿಗೆ ಜನ ಉತ್ತರ ನೀಡುತ್ತಾರೆ. ಎಲ್ಲರೂ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದಾಗ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದ ಅವರು ಇನ್ನೂ ಕೆಲಸ ಮಾಡುವ ತುಡಿತ ಇರುವ ನನಗೆ ಸೇವೆ ಮಾಡಲು ಹರಸಿ ಎಂದು ಪದವೀಧರರು, ವಕೀಲರು ಮತ್ತು ಶಿಕ್ಷಕರಲ್ಲಿ ಮನವಿ ಮಾಡಿದರು.ಕಳೆದೆರಡು ದಿನಗಳಿಂದ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಬಿರುಸಿನ ಮತಯಾಚನೆ ನಡೆಸುತ್ತಿರುವ ರಘುಪತಿ ಭಟ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೈವರ ದರ್ಶನ ಪಡೆದರು. ನಂತರ ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಮಂಗಳೂರು ಇಲ್ಲಿಗೆ ಭೇಟಿ ನೀಡಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಭಾನುವಾರ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.