ಕಾರ್ಯಕರ್ತರನ್ನು ಮರೆತರೆ ರಾಜಕಾರಣದಲ್ಲಿರಲು ಸಾಧ್ಯವಿಲ್ಲ: ಜಯಪ್ರಕಾಶ್‌ ಹೆಗ್ಡೆ

| Published : May 25 2024, 12:45 AM IST

ಕಾರ್ಯಕರ್ತರನ್ನು ಮರೆತರೆ ರಾಜಕಾರಣದಲ್ಲಿರಲು ಸಾಧ್ಯವಿಲ್ಲ: ಜಯಪ್ರಕಾಶ್‌ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಾರ್ಯಕರ್ತರನ್ನು ಮರೆತರೆ ರಾಜಕಾರಣದಲ್ಲಿರಲು ಸಾಧ್ಯವಿಲ್ಲ. ನಮ್ಮೊಂದಿಗೆ ಕಾರ್ಯಕರ್ತರೂ ಸಹ ಬೆಳೆಯಬೇಕು. ಎರಡನೇ ಹಂತದ ನಾಯಕರನ್ನು ಬೆಳೆಸುವ ಕಾರ್ಯ ನಾವು ಮಾಡಬೇಕಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್‌ ಚುನಾವಣೆ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾರ್ಯಕರ್ತರನ್ನು ಮರೆತರೆ ರಾಜಕಾರಣದಲ್ಲಿರಲು ಸಾಧ್ಯವಿಲ್ಲ. ನಮ್ಮೊಂದಿಗೆ ಕಾರ್ಯಕರ್ತರೂ ಸಹ ಬೆಳೆಯಬೇಕು. ಎರಡನೇ ಹಂತದ ನಾಯಕರನ್ನು ಬೆಳೆಸುವ ಕಾರ್ಯ ನಾವು ಮಾಡಬೇಕಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯ ಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್‌ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಮತದಾರರ ಮನೆ ಮನೆಗೆ ತೆರಳಿ ಸಂಪರ್ಕ ಮಾಡಬೇಕು. ಮುಖಂಡರಿಂದ ಅವರ ಮನವೊಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮೇ 28 ರಿಂದ ಜೂನ್ 3 ರವರೆಗೆ ಕಾರ್ಯಕರ್ತರು ಕ್ರಿಯಾಶೀಲವಾಗಿ ಶಿಕ್ಷಕರನ್ನು ಸಂಪರ್ಕಿಸಿ ಮನವೊಲಿಸಬೇಕು. ವಿಧಾನ ಪರಿಷತ್ತಿನಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಬೇಕು. ವಿಧಾನ ಸಭೆಯಲ್ಲಿ ಪಾಸ್‌ ಆದ ಬಿಲ್‌ಗಳು ಪರಿಷತ್ತಿಗೆ ಬಂದಾಗ ಸೋಲ ಕಾಣಬಾರದು. ನಮ್ಮ ಸಂಖ್ಯೆ ಹೆಚ್ಚಿದ್ದರೆ ಸರ್ಕಾರಕ್ಕೆ ಮುಜುಗರವಾಗುವುದನ್ನು ತಪ್ಪಿಸಬಹುದು ಎಂದರು.ಲೋಕಸಭಾ ಚುನಾವಣೆಯಲ್ಲಿ ನಮ್ಮ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ ಎಲ್ಲಾ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ವಿಧಾನ ಪರಿಷತ್‌ ಚುನಾವಣೆ ನಂತರ ಪ್ರತಿ ಪಂಚಾಯ್ತಿಗೆ ತೆರಳಿ ಕಾರ್ಯಕರ್ತರ ಭೇಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್‌ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಬರುತ್ತಿರುವ ವರದಿಗಳು, ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ಜಯಪ್ರಕಾಶ್‌ ಹೆಗ್ಡೆ ಅವರು ಗೆಲ್ಲುವುದು ನಿಶ್ಚಿತ. ಈ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಎಲ್ಲಾ ಶಾಸಕರು, ಕಾರ್ಯಕರ್ತರು, ಮುಖಂಡರು ನಮ್ಮದೇ ಚುನಾವಣೆ ಎಂದು ಭಾವಿಸಿ ಕೆಲಸ ಮಾಡಿದ್ದಾರೆ. ಫಲಿತಾಂಶದ ನಂತರ ಪಕ್ಷ ಹೇಗೆ ಕಟ್ಟಬೇಕು ಎಂದು ಸಮಾಲೋಚನೆ ನಡೆದಿದೆ. ಸಂಘಟನೆಯನ್ನ ಕ್ರಿಯಾತ್ಮಕವಾದ ಹಾದಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಪ್ರತಿ ಬೂತ್‌ನ ವಿಮರ್ಶೆ ಮಾಡುವ ಪ್ರಯತ್ನ ನಡೆದಿರುವುದು ವಿಶೇಷ ವಿಚಾರ ಎಂದು ಹೇಳಿದರು.

ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯನ್ನೂ ಗಂಭೀರವಾಗಿ ಎದುರಿಸಬೇಕು ಎನ್ನುವ ಸಂದೇಶವನ್ನು ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳ ಸಭೆ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಜಯಪ್ರಕಾಶ್ ಹೆಗ್ಡೆ ಪರ ಚುನಾವಣಾ ಪ್ರಚಾರ ಕಾರ್ಯ ಈ ಬಾರಿ ಬಹಳ ಚೆನ್ನಾಗಿ ನಡೆದಿದೆ. ಎಲ್ಲ ಕಾರ್ಯಕರ್ತರು ತೃಪ್ತಿಯಿಂದ ಕೆಲಸ ಮಾಡಿದ್ದಾರೆ. ಜಯಪ್ರಕಾಶ್ ಹೆಗ್ಡೆ ಉತ್ತಮ ಸಂಸದೀಯ ಪಟುವಾಗಿರುವ ಕಾರಣಕ್ಕೆ ಅವರು ಸಂಸತ್‌ಗೆ ಹೋಗಬೇಕಾದ ಅಗತ್ಯವಿದೆ ಎಂದರು.ಈ ಬಾರಿ ಜಯಪ್ರಕಾಶ್ ಹೆಗ್ಡೆ ಅವರು ಉತ್ತಮ ಅಂತರದಿಂದ ಗೆಲುವು ಸಾಧಿಸುತ್ತಾರೆ. ನಮ್ಮಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದರಲ್ಲಿ ಅವರು ಸಮರ್ಥರಿದ್ದಾರೆ ಎಂದು ಹೇಳಿದರು.ಈ ಬಾರಿ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೆ.ಕೆ.ಮಂಜುನಾಥ್‌ ಕುಮಾರ್ ಮತ್ತು ಆಯನೂರು ಮಂಜುನಾಥ್ ಸ್ಪರ್ಧಿಸಿದ್ದಾರೆ. ಎಲ್ಲಾ ಪದವೀಧರರಿಗೆ ಕಾಂಗ್ರೆಸ್ ಸರ್ಕಾರ ಉದ್ಯೋಗ ಸಿಗುವವರೆಗೆ ಯುವನಿಧಿ ಜಾರಿಗೆ ತಂದಿದೆ. ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿ ಗೊಳಿಸುವುದಾಗಿ ಭರವಸೆ ನೀಡಿರುವುದರಿಂದ ಈ ಚುನಾವಣೆ ನಮ್ಮ ಗೆಲುವಿಗೆ ಪೂರಕ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ವಿಧಾನ ಪರಿಷತ್‌ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಮಾತನಾಡಿದರು.