ಹೈಕಮಾಂಡ್ ಆದೇಶದ ಮುಂದೆ ಕುಣಿದಾಡಲು ಸಾಧ್ಯವಿಲ್ಲ: ಸಚಿವ ಸತೀಶ ಜಾರಕಿಹೊಳಿ

| Published : Jan 24 2025, 12:46 AM IST

ಹೈಕಮಾಂಡ್ ಆದೇಶದ ಮುಂದೆ ಕುಣಿದಾಡಲು ಸಾಧ್ಯವಿಲ್ಲ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ: ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎಲ್ಲವೂ ಶಾಂತವಾಗಿದೆ. ಹೈಕಮಾಂಡ್ ಆದೇಶದ ಮುಂದೆ ನಾನು ಕುಣಿದಾಡಲು ಸಾಧ್ಯವಿಲ್ಲ. ಈಗ ಪಕ್ಷ ಸಂಘಟನೆಯಷ್ಟೇ ನನ್ನ ಗುರಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎಲ್ಲವೂ ಶಾಂತವಾಗಿದೆ. ಹೈಕಮಾಂಡ್ ಆದೇಶದ ಮುಂದೆ ನಾನು ಕುಣಿದಾಡಲು ಸಾಧ್ಯವಿಲ್ಲ. ಈಗ ಪಕ್ಷ ಸಂಘಟನೆಯಷ್ಟೇ ನನ್ನ ಗುರಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಮ್ಮ ಎದುರು ಯಾವುದೇ ಹುದ್ದೆಯ ಬದಲಾವಣೆಯ ಪ್ರಸ್ತಾಪ ಇಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ. ಈ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಸಿಎಂ ಹುದ್ದೆಗಾಗಿ ಅಭಿಮಾನಿಗಳ ಪೂಜೆ ಹೊಸದಲ್ಲ‌. ಮೊದಲಿನಿಂದಲೂ ಪೂಜೆ ಮಾಡುವುದು ಅವರ ಅಭಿಮಾನ. ಮುಖ್ಯಮಂತ್ರಿ ಆಗಲು ಇನ್ನೂ ಕಾಲಾವಕಾಶ ಇದೆ. ಆದರೆ ತಾಳ್ಮೆಯಿಂದ ಕಾಯಬೇಕು ಎಂದು ಅಭಿಮಾನಿಗಳ ಪೂಜೆಗೆ ಪ್ರತಿಕ್ರಿಯೆ ನೀಡಿದರು.

ಬಸವೇಶ್ವರ ಏತ ನೀರಾವರಿ ಶೀಘ್ರ ಪೂರ್ಣ: ಅನೇಕ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಬಹುನಿರೀಕ್ಷಿತ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಈಗಾಗಲೇ ಶೇ.80ರಷ್ಟು ಅನುದಾನ ನೀಡಲಾಗಿದೆ. ಕೇವಲ ಶೇ.20ರಷ್ಟು ಬಾಕಿಯಿದೆ. ಬೋರ್ಡ್ ಮೀಟಿಂಗ್ ನಡೆದ ಬಳಿಕ ಇನ್ನುಳಿದ ಅನುದಾನ ಒದಗಿಸಿ ತ್ವರಿತವಾಗಿ ಆ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಇದೇ ವಿಚಾರಕ್ಕೆ ಶಾಸಕ ರಾಜು ಕಾಗೆ ಕೂಡ ಪದೇ ಪದೆ ನಮಗೆ ಹೇಳಿದ್ದಾರೆ. ಅದಕ್ಕಾಗಿ ₹200 ಕೋಟಿ ಹಣ ನೀಡಲಾಗಿದೆ. ಆ ಯೋಜನೆ ಆದಷ್ಟು ಬೇಗ ಮುಗಿಯಲಿ ಅನ್ನೋದು ನನ್ನ ಬಯಕೆ. ಇದಕ್ಕಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ: ಅಥಣಿ ಪಟ್ಟಣದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ತಹಸೀಲ್ದಾರಗೆ ಸೂಚನೆ ನೀಡುತ್ತೇನೆ. ಯಾರೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಎಚ್ಚರಿಸಿದರು.