15ರಂದು ಕೆನರಾ ಬ್ಯಾಂಕ್‌ ‘ಫ್ರೀಡಂ ರನ್’ ಮ್ಯಾರಥಾನ್

| Published : Aug 04 2024, 01:23 AM IST

15ರಂದು ಕೆನರಾ ಬ್ಯಾಂಕ್‌ ‘ಫ್ರೀಡಂ ರನ್’ ಮ್ಯಾರಥಾನ್
Share this Article
  • FB
  • TW
  • Linkdin
  • Email

ಸಾರಾಂಶ

ಈ ವರ್ಷದ ಮ್ಯಾರಾಥಾನ್‌ಗೆ ‘ರನ್ ಫಾರ್ ವುಮನ್ ಎಂಪವರ್‌ಮೆಂಟ್’ ಎಂಬ ಧ್ಯೇಯವನ್ನು ಹೊಂದಲಾಗಿದೆ. ಮಣಿಪಾಲದ ವೃತ್ತ ಕಚೇರಿಯಿಂದ ಆರಂಭವಾಗಿ, ಆರ್.ಎಸ್.ಬಿ. ಸಭಾಭವನ ಮುಂಭಾಗದಿಂದ ವೇಣುಗೋಪಾಲ ದೇವಸ್ಥಾನ, ಶಾಂತಿನಗರ, ಟ್ಯಾಪ್ಮಿಯಾಗಿ ಕಬ್ಯಾಡಿಯಲ್ಲಿ ಕೊನೆಯಾಗಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆನರಾ ಮ್ಯಾರಥಾನ್ ‘ಫ್ರೀಡಂ ರನ್ - 2024’ ಆ.15ರಂದು ನಡೆಯಲಿದೆ ಎಂದು ಬ್ಯಾಂಕ್‌ನ ಹಿರಿಯ ಪ್ರಬಂಧಕ ಸಚಿನ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ವರ್ಷದ ಮ್ಯಾರಾಥಾನ್‌ಗೆ ‘ರನ್ ಫಾರ್ ವುಮನ್ ಎಂಪವರ್‌ಮೆಂಟ್’ ಎಂಬ ಧ್ಯೇಯವನ್ನು ಹೊಂದಲಾಗಿದೆ. ಮಣಿಪಾಲದ ವೃತ್ತ ಕಚೇರಿಯಿಂದ ಆರಂಭವಾಗಿ, ಆರ್.ಎಸ್.ಬಿ. ಸಭಾಭವನ ಮುಂಭಾಗದಿಂದ ವೇಣುಗೋಪಾಲ ದೇವಸ್ಥಾನ, ಶಾಂತಿನಗರ, ಟ್ಯಾಪ್ಮಿಯಾಗಿ ಕಬ್ಯಾಡಿಯಲ್ಲಿ ಕೊನೆಯಾಗಲಿದೆ.

ಅಂದು ಬೆಳಗ್ಗೆ 5.30 ಕ್ಕೆ 21 ಕಿ.ಮೀ., 6 ಗಂಟೆಗೆ 10 ಕಿ.ಮೀ., 5 ಕಿ.ಮೀ 6.30ಕ್ಕೆ ಹಾಗೂ 3 ಕಿ.ಮೀ 7 ಗಂಟೆಗೆ ಆರಂಭವಾಗಲಿದ್ದು, 9.30 ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮ್ಯಾರಥಾನ್ 3, 5, 10 ಹಾಗು 21 ಕಿ.ಮೀ. ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದ್ದು, ವಿಜೇತರಿಗೆ ಒಟ್ಟು 5 ಲಕ್ಷ ರು. ನಗದು ಬಹುಮಾನ ನೀಡಲಾಗುತ್ತದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಪ್ರಬಂಧಕ ದುರ್ಗಾಪ್ರಸಾದ್, ಹಿರಿಯ ಪ್ರಬಂಧಕರಾದ ಸೂರಜ್ ಉಪ್ಪೂರು, ವಿಶಾಲ್ ಸಿಂಗ್, ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಮೂರ್ತಿ ಇದ್ದರು.

ಕೆನರಾ ಬ್ಯಾಂಕಿನ 3ನೇ ಆವೃತ್ತಿಯ ಮ್ಯಾರಥಾನ್ ಇದಾಗಿದೆ. ಈ ಬಾರಿಯ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸ್ಮರಣಿಕೆಯನ್ನು ನೀಡಲಾಗುವುದು. ಆಸಕ್ತರು ನೋಂದಾಣಿಗಾಗಿ ಕೆನರಾ ಬ್ಯಾಂಕಿನ ನಗರ ಕಚೇರಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ನೋಂದಣಿ ಮಾಡಬಹುದು.