ಕಡೂರುರೈತರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಯಲ್ಲಿ ಕೆನರಾ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ರೈತರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಯಲ್ಲಿ ಕೆನರಾ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.ತಾಲೂಕಿನ ದೊಡ್ಡಪಟ್ಟಣಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗುರುವಾರ ನಡೆದ ಬ್ಯಾಂಕಿನ 174ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಸಂಸ್ಥಾಪಕ ಅಮ್ಮೆಂಬಳ ಸುಬ್ರಾಯ ಪೈ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಬಹುದೊಡ್ಡದಾಗಿದೆ. ಕನ್ನಡಿಗರೇ ಸ್ಥಾಪಿಸಿದ ಕೆನರಾ ಬ್ಯಾಂಕ್ ಇಂದು ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಸ್ಥಳೀಯ ಶಾಖೆರೈತರಿಗೆ ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತಸ್ನೇಹಿ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿದೆ ಎಂದರು.ರೈತರು ಸಂಕಷ್ಟದ ಸಂದರ್ಭದಲ್ಲಿ ಬ್ಯಾಂಕ್ನಿಂದ ಸಾಲ ಪಡೆದು ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ. ಪಡೆದ ಸಾಲ ನಿಗದಿತ ಅವಧಿಯಲ್ಲಿ ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕ್ ಮತ್ತು ರೈತರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.ಶಾಖಾ ಪ್ರಬಂಧಕ ಭಾಸ್ಕರ್ ನಾಯಕ್ ಮಾತನಾಡಿ, ಕೆನರಾ ಬ್ಯಾಂಕ್ ವಾರ್ಷಿಕವಾಗಿ ₹30 ಲಕ್ಷ ಕೋಟಿಗೂ ಅಧಿಕ ವಹಿ ವಾಟು ನಡೆಸುವ ಮೂಲಕ ದೇಶದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಂತಿರುವ ಬ್ಯಾಂಕ್, ಉತ್ತಮ ಸೇವೆ ಮೂಲಕ ಗ್ರಾಹಕರ ವಿಶ್ವಾಸ ಮತ್ತು ಮೆಚ್ಚುಗೆ ಗಳಿಸಿದೆ. ರೈತರ ನೆಚ್ಚಿನ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ ಎಂದರು.ಬ್ಯಾಂಕ್ ಸಿಬ್ಬಂದಿ ಪಾಂಡ್ಯನ್ ರಾಜನ್, ಆಶಿಷ್ ಗೋಪಾಲ್, ರೋಷನ್, ಸ್ಥಳೀಯರಾದ ಸಗನಪ್ಪ, ಮನು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.