ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗೆ ನೀಡಿದ ಪರವಾನಗಿ ರದ್ದುಪಡಿಸಿ; ತಟ್ಟೆಹಳ್ಳಿ ಗ್ರಾಮಸ್ಥರ ಪ್ರತಿಭಟನೆ

| Published : Apr 01 2024, 12:46 AM IST

ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗೆ ನೀಡಿದ ಪರವಾನಗಿ ರದ್ದುಪಡಿಸಿ; ತಟ್ಟೆಹಳ್ಳಿ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಟ್ಟೆಹಳ್ಳಿ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾಣ ಇದ್ದು, ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಮಕ್ಕಳು ಬಂದು ಸೇರುತ್ತಾರೆ. ಅಲ್ಲದೆ ಇಲ್ಲಿ ತಿಂಗಳಿಗೆ ಎರಡರಿಂದ ಮೂರು ಅಪಘಾತಗಳು ಸಂಭವಿಸುತ್ತಿವೆ. ಹೀಗಿರುವಾಗ ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಮಹಿಳೆಯರು ಮತ್ತು ಶಾಲಾ ಕಾಲೇಜಿಗಳಿಗೆ ಹೋಗುವ ಹೆಣ್ಣುಮಕ್ಕಳಿಗೆ ಕಿರಿಕಿರಿ ಉಂಟು ಮಾಡಬಹುದು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನೀಡಿರುವ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಪಂಚಾಯಿತಿ ಕಚೇರಿ ಮುಂದೆ ತಟ್ಟೆಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಟ್ಟೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಕಲ್ಲಿಹಾಳ್ ಸರ್ಕಲ್‌ನಿಂದ ತಟ್ಟೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಇರುವುದು ಒಂದೇ ಒಂದು ರಸ್ತೆ. ಆದರೆ ಆ ರಸ್ತೆಯಲ್ಲಿ ಖಾಸಗಿಯವರಿಗೆ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಸ್ಥಳಿಯ ಗ್ರಾಮ ಪಂಚಾಯಿತಿ ಪಿಡಿಒ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ತರದೆ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಸ್ಥಳದಲ್ಲಿ ತಟ್ಟೆಹಳ್ಳಿ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾಣ ಇದ್ದು, ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಮಕ್ಕಳು ಬಂದು ಸೇರುತ್ತಾರೆ. ಅಲ್ಲದೆ ಇಲ್ಲಿ ತಿಂಗಳಿಗೆ ಎರಡರಿಂದ ಮೂರು ಅಪಘಾತಗಳು ಸಂಭವಿಸುತ್ತಿವೆ. ಹೀಗಿರುವಾಗ ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಮಹಿಳೆಯರು ಮತ್ತು ಶಾಲಾ ಕಾಲೇಜಿಗಳಿಗೆ ಹೋಗುವ ಹೆಣ್ಣುಮಕ್ಕಳಿಗೆ ಕಿರಿಕಿರಿ ಉಂಟು ಮಾಡಬಹುದು. ಆದ್ದರಿಂದ ನಮ್ಮ ಗ್ರಾಮಕ್ಕೆ ಬಾರ್ ಅಂಡ್ ರೆಸ್ಟೋರೆಂಟ್ ಬೇಡ ಎಂದು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದ್ದೇವೆ. ಆದರೂ ಇದನ್ನು ಅಲಕ್ಷಿಸಿ ಪಂಚಾಯಿತಿ ಪಿಡಿಒ ಪರವಾನಗಿ ನೀಡಿರುವುದು ಅಕ್ಷಮ್ಯ ಅಪರಾಧ ಎಂದರು.ಆಮಿಷಕ್ಕೆ ಬಲಿಯಾಗಿ ಪರವಾನಗಿ:

ಸಮಾಜ ಸೇವಕ ರಂಗನಾಥ್ ಮಾತನಾಡಿ, ಈಗಾಗಲೇ ಈ ಸ್ಥಳದಲ್ಲಿ ಬಾರ್, ಲಾಡ್ಜ್ ಮತ್ತು ರೆಸ್ಟೋರೆಂಟ್ ಬೇಡ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೂ ವಿಷಯ ತರಲಾಗಿದೆ. ಅಬಕಾರಿ ಡಿಸಿಯವರಿಗೂ ಮನವಿ ನೀಡಲಾಗಿದೆ. ಆದರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗಿ ಪರವಾನಗಿ ನೀಡಿದ್ದಾರೆ. ಒಂದು ವೇಳೆ ಈ ಪರವಾನಗಿ ರದ್ದುಪಡಿಸದೇ ಹೋದರೆ, ಮುಂದೆ ಇನ್ನೂ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಖಾನವಳಿ ತೆರೆಯುವುದಾಗಿ ಅರ್ಜಿ:

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್.ಮುದ್ದುವೀರಪ್ಪ ಮಾತನಾಡಿ, ಮಾ.11ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿಯ ಸರ್ವ ಸದಸ್ಯರು ಭಾಗವಹಿಸಿ ತಟ್ಟೆಹಳ್ಳಿಯ ಬಸ್ ನಿಲ್ದಾಣದ ಬಳಿ ಖಾನವಳಿ ಹೋಟೆಲ್ ತೆರೆಯುವುದಾಗಿ ಪಂಚಾಯಿತಿಗೆ ಅರ್ಜಿ ಬಂದ ಹಿನ್ನೆಲೆಯಲ್ಲಿ ಪರವಾನಗಿ ನೀಡಬಹುದು ಎಂದು ಎಲ್ಲಾ ಸದಸ್ಯರು ಒಪ್ಪಿ ತೀರ್ಮಾನಿಸಿದ್ದೇವು. ಜೊತೆಗೆ ಪರವಾನಗಿ ನೀಡುವಾಗ ಎಲ್ಲಾ ಸದಸ್ಯರ ಗಮನಕ್ಕೆ ಮತ್ತೊಮ್ಮೆ ತಂದು ಲೈಸೆನ್ಸ್ ನೀಡಬೇಕು ಎಂದು ಹೇಳಿದ್ದವು. ಆದರೆ, ಪಿಡಿಒ ನಮ್ಮ ಗಮನಕ್ಕೆ ತರದೇ ವಸತಿ ಮತ್ತು ಹೋಟೆಲ್ ಗಾಗಿ ಪರವಾನಗಿ ನೀಡಿದ್ದಾರೆ. ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿಎಸ್ಎಸ್ ತಾಲೂಕು ಸಂಚಾಲಕ ಕೆ.ರಂಗನಾಥ್, ಗ್ರಾಮ ಪಂಚಾಯತಿ ಸದಸ್ಯರು, ರೈತ ಸಂಘದ ತಾಲೂಕು ಅಧ್ಯಕ್ಷ ಪಂಚಾಕ್ಷರಪ್ಪ, ಬಾಬು, ವಿಜಯ್ ಕುಮಾರ್, ರವಿ ಕುಮಾರ್, ರಘಪತಿ, ಶಿವಕುಮಾರ, ಉಮೇಶ್, ಬೈರಪ್ಪ, ನಾಗರಾಜು ಸೇರಿ ಗ್ರಾಮಸ್ಥರಿದ್ದರು.