ಬ್ಯಾಡಗಿ: ತಾಂತ್ರಿಕ ದೋಷದಿಂದ ಕೂಡಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸ್ವಯಂ ಘೋಷಣಾ ಪತ್ರವನ್ನು ರದ್ದುಪಡಿಸುವಂತೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ಬೆಳೆಸಾಲ (ಕೆಸಿಸಿ/ಕೃಷಿಮೇಲೆ ಬೆಳೆಸಾಲ) ಸಾಲ ಪಡೆಯದೇ ಇರುವಂತಹ ರೈತರು ಸದರಿ ಯೋಜನೆಯಡಿ ಸ್ವಯಂ ಘೋಷಣಾ ಪತ್ರ ನೀಡುವಂತೆ ಸರ್ಕಾರ ಸೂಚನೆ ನೀಡಿದ್ದು ಇದೊಂದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ಘೋಷಣಾ ಪತ್ರಕ್ಕೆ ಸಹಿ ಮಾಡದಿರಲು ಮನವಿ: ಬೆಳೆವಿಮೆ ತುಂಬುವ ಸಂದರ್ಭದಲ್ಲಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡುವಂತೆ ರೈತರಲ್ಲಿ ಸೂಚನೆ ನೀಡುತ್ತಿದ್ದು, ಶೇ.98ರಷ್ಟು ಸಾಲ ಮಾಡಿದ ರೈತರ ಬೆಳೆವಿಮೆ ಅರ್ಜಿಗಳು ರದ್ದಾಗುವಂತೆ ಮಾಡುವ ಹುನ್ನಾರ ಇದರಲ್ಲಡಗಿದೆ ಎಂದು ಆರೋಪಿಸಿದರು.

ರೈತರ ಪರವಾದ ಯೋಜನೆಗಳಿಗೆ ಸರ್ಕಾರಗಳು ಇನ್ನಿಲ್ಲದ ತೊಡಕು ನೀಡುತ್ತಿದೆ, ಬೆಳೆಸಾಲ ಕೃಷಿ ಅಭಿವೃದ್ಧಿಗೆ ನೀಡುವ ಹಣವಾಗಿದೆ. ಇದಕ್ಕೆ ಬ್ಯಾಂಕಗಳು ಬಡ್ಡಿಯನ್ನೂ ಸಹ ಪಡೆದುಕೊಳ್ಳುತ್ತಿವೆ. ಹೀಗಿರುವಾಗ ಬೆಳೆವಿಮೆ ವಿವಿಧ ಕಾರಣಗಳಿಗೆ ಬೆಳೆ ಬಾರದಿದ್ದಾಗ ನೀಡುವಂತಹ ಪರಿಹಾರ ಮೊತ್ತವಾಗಿದ್ದು ಯಾವುದೇ ಕಾರಣಕ್ಕೂ ಎರಡನ್ನೂ ಲಿಂಕ್ ಮಾಡದಂತೆ ಆಗ್ರಹಿಸಿದ್ದಾರೆ.

ಬಹುತೇಕ ರೈತರು ಬೆಳೆಸಾಲ ಪಡೆದುಕೊಂಡೇ ಕೃಷಿ ನಡೆಸುವವರಿದ್ದಾರೆ. ಇದರಲ್ಲಿ ಕೃಷಿ ಮೇಲಿನ ನಷ್ಟದಿಂದ ಬಹುತೇಕರು ಕಟಬಾಕಿದಾರರಾಗಿದ್ದಾರೆ. ಆದರೆ ಬ್ಯಾಂಕ್‌ಗಳು ಬೆಳೆವಿಮೆ ತುಂಬಿಸಿಕೊಳ್ಳದೇ ಇರುವುದರಿಂದ ರೈತ ಅನಿವಾರ್ಯವಾಗಿ ಗ್ರಾಮ-1ರಲ್ಲಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಿದ ಬಳಿಕವೇ ಬೆಳವಿಮೆ ತುಂಬಬೇಕಾಗುತ್ತದೆ. ಹೀಗಿರುವಾಗ ಬೆಳೆಸಾಲ ಇಲ್ಲವೆಂದು ಸಹಿ ಮಾಡಲು ಹೇಗೆ ಸಾಧ್ಯ? ಅಷ್ಟಕ್ಕೂ ಸಹಿ ಮಾಡಿದಲ್ಲಿ ಮುಂದೆ ತಪ್ಪು ಮಾಹಿತಿ ನೀಡಿರುವುದಾಗಿ ಅರ್ಜಿ ತಿರಸ್ಕೃತಗೊಳ್ಳಲಿದ್ದು ಕೂಡಲೇ ಸರ್ಕಾರ ಸ್ವಯಂ ಘೋಷಣಾ ಪತ್ರವನ್ನು ರದ್ದುಪಡಿಸಿ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸೌಲಭ್ಯ ಪಡೆ ದುಕೊಳ್ಳಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.


ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮಾರ್ಗಸೂಚಿಯಂತೆ ಕೃಷಿ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಯೋಜನೆಗೆ ವ್ಯಾಪ್ತಿಗೆ ಒಳಪಡಿಸುವಂತೆ ಹೇಳುತ್ತದೆ. ಆದರೆ ಬ್ಯಾಂಕ್‌ಗಳು ಕಟಬಾಕಿದಾರರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡುತ್ತಿರುವುದು ದುರಂತದ ಸಂಗತಿ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಕಟಬಾಕಿದಾರರ ಬೆಳೆವಿಮೆ ತುಂಬಿಸಿಕೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ರುದ್ರಗೌಡ ಕಾಡನಗೌಡ್ರ, ಮೌನೇಶ ಕಮ್ಮಾರ, ಜಾನ ಪುನೀತ, ಸುಭಾಸ್ ಬನ್ನಿಹಟ್ಟಿ ಚಿಕ್ಕಪ್ಪ ಛತ್ರದ ಹಾಗೂ ಇನ್ನಿತರರಿದ್ದರು.