ಸಾರಾಂಶ
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಶುಕ್ರವಾರ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದಾಗಿ ರದ್ದು ಪಡಿಸಲಾಯಿತು.
ಕನ್ನಡಪ್ರಭ ವಾರ್ತೆ ಗೋಕಾಕ
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇಒ ನೇತೃತ್ವದಲ್ಲಿ ಶುಕ್ರವಾರ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದಾಗಿ ರದ್ದು ಪಡಿಸಲಾಯಿತು.ನಗರದ ಸಮೀಪದ ಬಸವೇಶ್ವರ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ವರ್ಗಾವಣೆ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ನೇತೃತ್ವದಲ್ಲಿ ನಡೆಸುತ್ತಿದ್ದ ಸಮಯದಲ್ಲಿ ಕೆಲವು ಮುಖಂಡರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇಒ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಗೈರು ಹಾಜರಿ ಇದ್ದು, ಈ ಸಭೆ ನಡೆಸದಂತೆ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರೊಂದಿಗೆ ವಾಗ್ವಾದದಲ್ಲಿ ತೊಡಗಿದರು. ಹೀಗಾಗಿ ಉಪವಿಭಾಗಾಧಿಕಾರಿಯವರು ಸಭೆಯನ್ನು ಮುಂದೂಡಲಾಗಿದ್ದು, ಸಭೆಯ ದಿನಾಂಕ ತಿಳಿಸಲಾಗುವುದು ಎಂದು ಹೊರ ನಡೆದರು.ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಜನರು ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಸಮಸ್ಯೆ ಬಗೆಹರಿಸಬಹುದು ಎಂಬ ಆಶಯದಿಂದ ನೂರಾರು ಜನ ಆಗಮಿಸಿದ್ದರು. ಆದರೆ, ಉಪವಿಭಾಗದಿಕಾರಿ ಪ್ರಭಾವತಿ ಫಕೀರಪುರ ಅವರಿಗೆ ಸಮಸ್ಯೆಗಳನ್ನು ಆಲಿಸಲು ಬಿಡದ ಕೆಲವು ನಾಯಕರು ಅವರೊಂದಿಗೆ ವಾಗ್ವಾದಕ್ಕಿಳಿದದ್ದರಿಂದ ಸಮಸ್ಯೆಗಳನ್ನು ಹೊತ್ತು ತಂದಿದ್ದ ಜನರು ಕೈ ಚೆಲ್ಲಿ ಕೂಡುವಂತಾಯಿತು. ರೈತರ ಜಮೀನು ಸಮಸ್ಯೆ, ಬೀಜ, ಗೊಬ್ಬರ, ವಿದ್ಯುತ್ ಸೇರಿದಂತೆ ಇನ್ನೂ ಹತ್ತು ಹಲವಾರು ಸಮಸ್ಯೆಗಳನ್ನು ಉಪವಿಭಾಗಾಧಿಕಾರಿಗಳು ಬಗೆಹರಿಸುತ್ತಿದ್ದರು. ಆದರೆ, ಕೆಲವರಿಂದ ಈ ಸಭೆ ರದ್ದಾಗಿದ್ದು ಬೇಸರವಾಗಿದೆ ಎಂದು ಜನಸ್ಪಂದನ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ತಮ್ಮ ಅಳಲನ್ನು ತೊಡಿಕೊಂಡರು.
ಗೋಕಾಕ ಹಾಗೂ ಮೂಡಲಗಿ ಭಾಗದ ರೈತರ ಸಮಸ್ಯೆ, ಸಾರ್ವಜನಿಕರ ಅಹವಾಲು ಸ್ವೀಕೃತವಾಗದೇ ರದ್ದಾಗಿರುವ ಸಭೆ ಆದಷ್ಟು ಬೇಗ ನೂತನ ಜಿಲ್ಲಾಧಿಕಾರಿಗಳು ಹಮ್ಮಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವಾಗಬೇಕಿದೆ ಎಂದು ರೈತ ಮುಖಂಡರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ಗೋಕಾಕ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.