ಆರಂಭಿಕ ಹಂತದ ಪತ್ತೆಯಿಂದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಸಾಧ್ಯ: ಡಾ.ಸಹನಾ

| Published : Sep 19 2025, 01:00 AM IST

ಆರಂಭಿಕ ಹಂತದ ಪತ್ತೆಯಿಂದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಸಾಧ್ಯ: ಡಾ.ಸಹನಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪುತ್ತಿರುವ ಹೆಣ್ಣು ಮಕ್ಕಳ ಪ್ರಕರಣಗಳಲ್ಲಿ ಗರ್ಭಾಶಯದ ಬಾಯಿಯ ಕ್ಯಾನ್ಸರ್ ಅತಿ ಹೆಚ್ಚು. ಬಿಳಿ ಮುಟ್ಟು, ಮುಟ್ಟಿಲ್ಲದ ವೇಳೆಯಲ್ಲಿ ರಕ್ತಸ್ರಾವ ಅಥವಾ ಅತಿ ಹೆಚ್ಚಿನ ರಕ್ತಸ್ರಾವ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಆಗುವುದು ಅಗತ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಕ್ಯಾನ್ಸರ್ ಕಾಯಿಲೆಗೆ ನಿರ್ದಿಷ್ಟವಾದ ಕಾರಣವಿಲ್ಲ. ಪ್ರಾರಂಭದ ಹಂತದಲ್ಲಿ ಪತ್ತೆಯಾದರು ಗುಣಮುಖರಾಗುವ ಸಾಧ್ಯತೆ ಹೆಚ್ಚು ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಜ್ಞೆ ಡಾ. ಸಹನಾ ಗಣೇಶ್ ತಿಳಿಸಿದರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗ, ಯುವ ರೆಡ್ ಕ್ರಾಸ್ ಮತ್ತು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗರ್ಭಾಶಯದ ಬಾಯಿಯ ಕ್ಯಾನ್ಸರ್: ಲಕ್ಷಣ ಮತ್ತು ಕಾರಣಗಳು ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪುತ್ತಿರುವ ಹೆಣ್ಣು ಮಕ್ಕಳ ಪ್ರಕರಣಗಳಲ್ಲಿ ಗರ್ಭಾಶಯದ ಬಾಯಿಯ ಕ್ಯಾನ್ಸರ್ ಅತಿ ಹೆಚ್ಚು. ಬಿಳಿ ಮುಟ್ಟು, ಮುಟ್ಟಿಲ್ಲದ ವೇಳೆಯಲ್ಲಿ ರಕ್ತಸ್ರಾವ ಅಥವಾ ಅತಿ ಹೆಚ್ಚಿನ ರಕ್ತಸ್ರಾವ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಆಗುವುದು ಅಗತ್ಯ ಎಂದರು.

ಇಂದು ಗರ್ಭಾಶಯದ ಬಾಯಿಯ ಕ್ಯಾನ್ಸರ್ ಅನ್ನು ತಡೆಗಟ್ಟಲು ಎಚ್ ಪಿವಿ ಲಸಿಕೆ ಲಭ್ಯವಿದೆ. 12 ರಿಂದ 26 ವಯಸ್ಸಿನ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ನೀಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು. ಹಾಗೆಯೇ 46 ವರ್ಷ ಒಳಗಿನ ಹೆಂಗಸರು ಸಹ ಲಸಿಕೆಯನ್ನು ಪಡೆಯಲು ಸಾಧ್ಯ ಎಂದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರತ್ನಮ್ಮ ಮಾತನಾಡಿ, ಹೆಣ್ಣು ಮಕ್ಕಳು ಸಂಕೋಚ ಸ್ವಭಾವವನ್ನು ಬಿಟ್ಟು ವೈದ್ಯರ ಬಳಿ ಮುಕ್ತವಾಗಿ ಮಾತನಾಡುವ, ತಪಾಸಣೆಗೆ ಹೋಗುವ ಅವಶ್ಯಕತೆ ಇದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಮತ್ತು ಟೆರೇಸಿಯನ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಂತೋನಿ ಮೋಸೆಸ್, ಮಹಾರಾಣಿ ಮಹಿಳಾ ಕಾಲ ಕಾಲೇಜಿನ ಐಕ್ಯೂಎಸಿ. ಸಂಚಾಲಕ ಡಾ.ಎನ್. ಪ್ರಕಾಶ್, ಯುವ ರೆಡ್ ಕ್ರಾಸ್ ಘಟಕಗಳ ಅಧಿಕಾರಿಗಳಾದ ಪಿ.ಎಸ್. ರಘು, ಡಾ. ಅಶ್ವಿನಿ, ಗ್ರಂಥಪಾಲಕರಾದ ಡಾ. ಪ್ರಮೋದಿನಿ, ಪಿ.ಕೆ. ಶೋಭಾ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್ ಇದ್ದರು. ಅಂತಿಮ ವರ್ಷ ಪತ್ರಿಕೋದ್ಯಮ ವಿದ್ಯಾರ್ಥಿನಿ ವೈಷ್ಣವಿ ನಿರೂಪಿಸಿದರು.

ಮಾವುತರು, ಕಾವಾಡಿಗಳ ಕುಟುಂಬಗಳಿಗಾಗಿ ಉಚಿತ ಆರೋಗ್ಯ ಶಿಬಿರ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಅಂಗವಾಗಿ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ಸ್ ಮತ್ತು ಕ್ಲಿನಿಕ್ಸ್ ವತಿಯಿಂದ ಅರಮನೆ ಆವರಣದಲ್ಲಿ ಆನೆಗಳ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ವಿಶೇಷ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಸಂಪೂರ್ಣ ರಕ್ತ ಗಣನೆ ಸೇರಿದಂತೆ ಹಲವು ತಪಾಸಣೆಗಳು ನಡೆದವು. ತಜ್ಞ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಸ್ವಯಂಸೇವಕರ ತಂಡವು ತಪಾಸಣೆಗಳ ಜೊತೆಗೆ ಮುನ್ನೆಚ್ಚರಿಕಾ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಪಾಲ್ಗೊಂಡವರಿಗೆ ಪೌಷ್ಟಿಕ ಆಹಾರ, ಉತ್ತಮ ಜೀವನಶೈಲಿ ಮತ್ತು ರೋಗಗಳ ತ್ವರಿತ ಪತ್ತೆಯ ಮಹತ್ವವನ್ನು ವಿವರಿಸಿದರು.

ಸ್ತ್ರೀರೋಗ ತಜ್ಞೆ ಡಾ.ಡಿ. ಪೂಜಾ, ಬಾಲರೋಗ ತಜ್ಞೆ ಡಾ.ಕೆ.ಸಾಯಿ ಮನಸ್ವಿನಿ ಮೊದಲಾದವರು ಇದ್ದರು.