ಮುಂಜಾಗ್ರತಾ ಕ್ರಮದಿಂದ ಕ್ಯಾನ್ಸರ್ ತಡೆಯಲು ಸಾಧ್ಯ: ಡಾ. ಸುರೇಶ ಉಳ್ಳಾಗಡ್ಡಿ

| Published : Feb 08 2025, 12:32 AM IST

ಮುಂಜಾಗ್ರತಾ ಕ್ರಮದಿಂದ ಕ್ಯಾನ್ಸರ್ ತಡೆಯಲು ಸಾಧ್ಯ: ಡಾ. ಸುರೇಶ ಉಳ್ಳಾಗಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಕ್ರಮ, ಅನುವಂಶೀಯತೆ, ಕೆಲಸದ ಒತ್ತಡ, ಜೀವನ ಶೈಲಿ ಹೀಗೆ ವಿವಿಧ ಸಾಧ್ಯತೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೇವೆ. ಆದರೆ ಕೆಲವು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ಯಾನ್ಸರ್ ಬಾರದಂತೆ ತಡೆಯಬಹುದಾಗಿದೆ ಎಂದು ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ರೇಡೀಯೇಶನ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಉಳ್ಳಾಗಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಹಾರ ಕ್ರಮ, ಅನುವಂಶೀಯತೆ, ಕೆಲಸದ ಒತ್ತಡ, ಜೀವನ ಶೈಲಿ ಹೀಗೆ ವಿವಿಧ ಸಾಧ್ಯತೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೇವೆ. ಆದರೆ ಕೆಲವು ಮುಂಜಾಗ್ರತಾ ಕ್ರಮ ಕೈಗೊಂಡರೆ ಕ್ಯಾನ್ಸರ್ ಬಾರದಂತೆ ತಡೆಯಬಹುದಾಗಿದೆ ಎಂದು ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ರೇಡೀಯೇಶನ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಉಳ್ಳಾಗಡ್ಡಿ ಹೇಳಿದರು.

ನಗರದ ಬಿಇಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಕಾಲೇಜಿನ ಸಭಾಂಗಣದಲ್ಲಿ ಶಾಂತಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್ ಪತ್ತೆ, ಅಚಿಕಿತ್ಸೆ, ಮುಂಜಾಗ್ರತಾ ಕ್ರಮಗಳು ಮತ್ತು ರೋಗ ತಡೆಗಟ್ಟುವ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ನಮ್ಮ ದೇಹವನ್ನು ಆವರಿಸಿಕೊಳ್ಳಲು ಹಲವು ಕಾರಣಗಳಿವೆ ಎಂದು ಹೇಳಿದರು.

ನಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಶಿಸ್ತು ಪಾಲನೆ ಹಾಗೂ ಮೈಕ್ರೋಪ್ಲಾಸ್ಟಿಕ್ಸ್ ಬಳಕೆ, ತಂಬಾಕು ಸೇವನೆ, ಧೂಮಪಾನ, ಮದ್ಯಪಾನ ಸೇವನೆ ನಿಯಂತ್ರಿಸುವುದರಿಂದ ಕ್ಯಾನ್ಸರ್ ಅಪಾಯ ತಕ್ಕಮಟ್ಟಿಗೆ ಕಡಿಮೆ ಮಾಡಬಹುದು. 9-22 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಎಚ್.ಪಿ.ವಿ ಲಸಿಕೆ ಹಾಕುವುದರಿಂದ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಸೋಂಕು ಮತ್ತು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.ಶಾಂತಿ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಪ್ರಾಂಶುಪಾಲ ಪ್ರೊ.ಸುರೇಶಗೌಡ ಪಾಟೀಲ ಮಾತನಾಡಿ, 2025ರ ವಿಶ್ವ ಕ್ಯಾನ್ಸರ್ ದಿನಾಚರಣೆ ಧ್ಯೇಯವಾಕ್ಯ ಯುನೈಟೆಡ್ ಬೈ ಯುನಿಕ್ ಎಂಬುದಾಗಿದೆ. ಇದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರೋಗಿ ಕೇಂದ್ರಿತ ಆರೈಕೆಯ ಮಹತ್ವ ಒತ್ತಿ ಹೇಳುತ್ತದೆ. ಈ ವಿಷಯ 2025 ರಿಂದ 2027ರವರೆಗೆ ನಡೆಯುವ ಮೂರು ವರ್ಷಗಳ ಅಭಿಯಾನದ ಭಾಗವಾಗಿದ್ದು, ಕ್ಯಾನ್ಸರ್ ರೋಗಿಗಳು, ರೋಗದಿಂದ ಗುಣಮುಖವಾಗುತ್ತಿರುವವರು ಹಾಗೂ ಆರೈಕೆದಾರರ ವೈಯಕ್ತಿಕ ಪ್ರಮಾಣ ಎತ್ತಿ ತೋರಿಸುತ್ತದೆ ಎಂದರು.

ಕ್ಯಾನ್ಸರ್ ಮಾರಕ ರೋಗ ನಿಜ. ಆದರೆ ಗುಣಪಡಿಸಲಾಗದ ಕಾಯಿಲೆಯೇನಲ್ಲ. ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ತಿಳಿದು ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ವಾಸಿ ಮಾಡಬಹುದು. ಕ್ಯಾನ್ಸರ್ ರೋಗ ಲಕ್ಷಣ ನಿರ್ಲಕ್ಷ್ಯ ಮಾಡದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಿ.ಇ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಯು.ಎನ್. ಧಂದರಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಾವು ಸೇವಿಸುವ ಕೆಲವೊಂದು ಆಹಾರ ಪದಾರ್ಥಗಳಲ್ಲಿ ಆಂಟಿ ಆ್ಯಕ್ಸಿಡೆಂಟ್‌, ಫೈಟೊಕೆಮಿಕಲ್‌ಗಳು, ನಾರಿನ ಅಂಶಗಳು ಮತ್ತು ಕೊಬ್ಬು ಹೊಂದಿರುತ್ತದೆ. ಅವುಗಳ ಸೇವನೆಯಿಂದ ನಮ್ಮ ದೇಹದಲ್ಲಿನ ವಿವಿಧ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಿ, ಕ್ಯಾನ್ಸರ್ ಕಣಗಳ ಬೆಳವಣಿಗೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.ಕಾಲೇಜಿನ ಕಾಲೇಜಿನ ಉಪನ್ಯಾಸಕಿ ರೇಣುಕಾ ಅಮಲಝರಿ ಸ್ವಾಗತಿಸಿದರು. ಎನ್ನೆಸ್ಸೆಸ್‌ ಅಧಿಕಾರಿ, ದೇವೇಂದ್ರ ಗವಾರಿ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಸಂಕಣ್ಣವರ ವಂದಿಸಿದರು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.