ಮೌನವಾಗಿ ಕಾಡುತ್ತಿರುವ ಕ್ಯಾನ್ಸರ್; ಅಂಕೋಲಾದಲ್ಲಿ ಆತಂಕದ ಚಿತ್ರಣ
ಮರ್ಯಾದೆಗೆ ಅಂಜಿ ಮರೆಮಾಚುವ ಕ್ಯಾನ್ಸರ್; ಚಿಕಿತ್ಸೆ ತಡವಾಗಿ ಸಂಕಷ್ಟಅಂಕೋಲಾದಲ್ಲಿ ಶೇ. 2ರಷ್ಟು ಜನರಿಗೆ ಕ್ಯಾನ್ಸರ್
ರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾ
ಒಂದು ಕಾಲದಲ್ಲಿ ಅಪರೂಪಕ್ಕೆ ಕೇಳಿಬರುತ್ತಿದ್ದ ಕ್ಯಾನ್ಸರ್ ಇಂದು ತಾಲೂಕಿನಲ್ಲಿ ಆತಂಕಕಾರಿಯಾಗಿ ವೇಗದಲ್ಲಿ ವ್ಯಾಪಿಸುತ್ತಿದೆ. ದುಶ್ಚಟಗಳು, ಜೀವನಶೈಲಿಯ ಬದಲಾವಣೆ ಹಾಗೂ ಚಿಕಿತ್ಸೆಗೆ ವಿಳಂಬ ಮಾಡುತ್ತಿರುವ ಪ್ರವೃತ್ತಿಯಿಂದ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಕರಣ ಏರಿಕೆಯಾಗುತ್ತಿವೆ. ತಾಲೂಕಿನಲ್ಲಿ ಸುಮಾರು ಶೇ. 2ರಷ್ಟು ಜನರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬುದು ಆರೋಗ್ಯ ಇಲಾಖೆಯ ಆಂತರಿಕ ಅಂಕಿ-ಅಂಶಗಳಿಂದ ಗೊತ್ತಾಗಿದೆ.
ಮುಖ್ಯವಾಗಿ ತಂಬಾಕು ಸೇವನೆಯಿಂದ ಉಂಟಾಗುವ ಬಾಯಿ ಕ್ಯಾನ್ಸರ್, ಮದ್ಯಪಾನದಿಂದ ಉಂಟಾಗುವ ಲಿವರ್ ಮತ್ತು ಕರುಳಿನ ಕ್ಯಾನ್ಸರ್ ಪ್ರಕರಣ ಹೆಚ್ಚಾಗಿರುವುದು ಆರೋಗ್ಯ ಇಲಾಖೆಯನ್ನು ಕಳವಳಕ್ಕೆ ಈಡುಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ವ್ಯಸನಗಳ ಪರಿಣಾಮ ಜೀವವನ್ನೇ ಕಸಿಯುವ ಮಟ್ಟಕ್ಕೆ ತಲುಪಿದೆ.
ಗರ್ಭಕೋಶ, ಸ್ತನ, ಶ್ವಾಸಕೋಶ, ಮೆದುಳು, ರಕ್ತ, ಲಿವರ್, ಕರುಳು ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್ ಪ್ರಕರಣಗಳು ತಾಲೂಕಿನಲ್ಲಿ ದಾಖಲಾಗುತ್ತಿವೆ. ಆದರೆ ಬಾಯಿ ಕ್ಯಾನ್ಸರ್ ಹಾಗೂ ಲಿವರ್ ಸಂಬಂಧಿತ ಕ್ಯಾನ್ಸರ್‌ಗಳೇ ಹೆಚ್ಚಾಗಿ ಕಂಡುಬರುತ್ತಿವೆ. ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಹಾಗೂ ಮದ್ಯಪಾನದ ದುಷ್ಪರಿಣಾಮ ಇಂದು ಅನೇಕ ಕುಟುಂಬಗಳ ಬದುಕನ್ನು ದುಃಖದತ್ತ ತಳ್ಳುತ್ತಿದೆ.ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಕ್ಯಾನ್ಸರ್ ಇರುವುದು ತಿಳಿದಿದ್ದರೂ ಕೆಲವರು ಸಾಮಾಜಿಕ ಮುಜುಗರ ಅಥವಾ ಮರ್ಯಾದೆಗೆ ಅಂಜಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಹೊರಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ತಾಲೂಕಿನ ನೈಜ ಅಂಕಿ-ಅಂಶಗಳೂ ಅಪೂರ್ಣವಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯೂ ರೋಗಿಗಳಿಗೆ ಸಂಕಷ್ಟ ತಂದೊಡ್ಡಿದೆ.
ಕೊನೆಯ ಹಂತದಲ್ಲಿ ಆಸ್ಪತ್ರೆಗೆ:ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ಚಿಕಿತ್ಸೆ ಮೂಲಕ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಅಂಕೋಲಾದಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಕೇವಲ ಶೇ. 25ರಷ್ಟು ರೋಗಿಗಳು ಮಾತ್ರ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ, ಶೇ. 75ಕ್ಕಿಂತ ಹೆಚ್ಚು ಮಂದಿ 4ನೇ ಹಂತ ತಲುಪಿದ ಬಳಿಕವೇ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಹಂತದಲ್ಲಿ ಚಿಕಿತ್ಸೆ ಕಷ್ಟವಾಗುವುದರಿಂದ ವೈದ್ಯರಿಗೂ ರೋಗಿಯನ್ನು ಉಳಿಸುವುದು ದೊಡ್ಡ ಸವಾಲಾಗುತ್ತಿದೆ.
ಏಕೆ ಹೆಚ್ಚುತ್ತಿದೆ ಕ್ಯಾನ್ಸರ್?:ವೈದ್ಯರ ಪ್ರಕಾರ ಅನುವಂಶೀಯ ಕಾರಣಗಳ ಜತೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಸೇವನೆ, ಅಧಿಕ ಮಾಂಸಾಹಾರ, ಮದ್ಯಪಾನ, ತಂಬಾಕು ಉತ್ಪನ್ನಗಳ ನಿರಂತರ ಬಳಕೆ, ಬೀಡಿ-ಸಿಗರೇಟ್ ಸೇದುವುದು, ಗುಟ್ಕಾ, ಮದ್ಯ ಸೇವನೆ, ಕೆಲವು ಸಂದರ್ಭಗಳಲ್ಲಿ ಗರ್ಭನಿರೋಧಕ ಮಾತ್ರೆಗಳ ಅನಗತ್ಯ ಬಳಕೆ ಮುಂತಾದ ಅಂಶಗಳು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ.
ಆತಂಕಕಾರಿ ಅಂಶವೆಂದರೆ, ಹದಿಹರೆಯದವರಲ್ಲೂ ಹಾಗೂ ಮಕ್ಕಳಲ್ಲೂ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿದ್ದು, ಒಟ್ಟು ಕ್ಯಾನ್ಸರ್ ರೋಗಿಗಳಲ್ಲಿ ಸುಮಾರು ಶೇ. 8ರಷ್ಟು ಮಕ್ಕಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ತಾಲೂಕಿನಲ್ಲಿ ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ತಂಬಾಕು ಹಾಗೂ ಮದ್ಯದ ದುಶ್ಚಟಗಳಿಂದ ಬಾಯಿ, ಕರುಳು ಹಾಗೂ ಲಿವರ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತಿವೆ. ಈ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ಹಾಗೂ ವ್ಯಸನಮುಕ್ತಿ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಜನರು ದುಶ್ಚಟಗಳನ್ನು ತ್ಯಜಿಸಿದರೆ ಕ್ಯಾನ್ಸರ್ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ.
ಲಕ್ಷಣಗಳು:ಬಾಯಿಯಲ್ಲಿ ಗುಣವಾಗದ ಹುಣ್ಣು.ಗಂಟಲಲ್ಲಿ ಅಥವಾ ಕುತ್ತಿಗೆಯಲ್ಲಿ ಗಡ್ಡೆ.ಕಾರಣವಿಲ್ಲದೆ ತೂಕ ಇಳಿಕೆಯಾಗುವುದು.
ದೀರ್ಘಕಾಲದ ಕೆಮ್ಮು ಅಥವಾ ರಕ್ತಸ್ರಾವ.ಮಲ ಅಥವಾ ಮೂತ್ರ ವಿಸರ್ಜನೆಯಲ್ಲಿ ಅಸಹಜ ಬದಲಾವಣೆ.
ದೇಹದಲ್ಲಿ ಅಸಹಜ ರಕ್ತಸ್ರಾವ ಅಥವಾ ನಿರಂತರ ನೋವು.