ಸಾರಾಂಶ
ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸೆ.10ರಂದು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಡಾ.ಅಜಯ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಸಣ್ಣಗಡ್ಡೆ ಅಂತಾ ಯಾರೂ ಕಡೆಗಣನೆ ಸಲ್ಲದು: ಡಾ.ಅಜಯ್ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸೆ.10ರಂದು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಡಾ.ಅಜಯ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ದಾವಣಗೆರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ ಎಂದರು.ಶೇ.50ರಷ್ಟು ರಿಯಾಯಿತಿ ಸೌಲಭ್ಯ:
ಸ್ತನ ಕ್ಯಾನ್ಸರ್, ಗರ್ಭಕೋಶ, ಗುದದ್ವಾರ, ಅನ್ನನಾಳ, ಬಾಯಿ, ಕುತ್ತಿಗೆ ಮತ್ತು ಗಂಟಲು ಕ್ಯಾನ್ಸರ್ ಸೇರಿದಂತೆ ಆಪರೇಷನ್, ಕೀಮೋಥೆರಪಿ, ರೇಡಿಯೋ ಥೆರಪಿ ಚಿಕಿತ್ಸೆ ಸಹ ಲಭ್ಯವಿದೆ. ಶಿಬಿರದಲ್ಲಿ ತಪಾಸಣೆ ನಂತರ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಅಂಥವರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಳ್ಳುವವರು ಈ ಹಿಂದೆ ಕ್ಯಾನ್ಸರ್, ರಕ್ತ ಪರೀಕ್ಷೆ ಮಾಡಿಸಿದ್ದು ಸೇರಿದಂತೆ ಹಳೆಯ ವೈದ್ಯಕೀಯ ದಾಖಲಾತಿಗಳ ಸಮೇತ ಶಿಬಿರಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.ಎಲ್ಲ ಗಡ್ಡೆಗಳೂ ಕ್ಯಾನ್ಸರ್ ಆಗಿರಲ್ಲ:
ಕ್ಯಾನ್ಸರ್ ಇರುವ ಬಗ್ಗೆ ಅನೇಕರಿಗೆ ಗೊತ್ತಾಗುವುದೇ ಇಲ್ಲ. ಅದೊಂದು ಮಾಮೂಲು ಗಡ್ಡೆಯೆಂದು ಸುಮ್ಮನಾಗುತ್ತಾರೆ. ತೀವ್ರ ನೋವು ಕಾಣಿಸಿಕೊಂಡಾಗ ಮಾತ್ರ ತಪಾಸಣೆ ಮಾಡಿಸಿಕೊಂಡರಷ್ಟೇ ಅದು ಕ್ಯಾನ್ಸರ್ ಎಂಬುದು ಗೊತ್ತಾಗುತ್ತದೆ. ಪ್ರಥಮ ಹಂತದಲ್ಲೇ ಗುರುತಿಸಿದರೆ, ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿ, ಗುಣಪಡಿಸಬಹುದು. ಎಲ್ಲ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಆದರೂ, ತಪಾಸಣೆ ಮಾಡಿಸಿಕೊಳ್ಳಬೇಕಾದುದು ಅತಿ ಮುಖ್ಯ ಎಂದು ತಿಳಿಸಿದರು.ಆರೋಗ್ಯ ತಪಾಸಣೆ ಮುಖ್ಯ:
ಪುರುಷರು ಸಾಮಾನ್ಯವಾಗಿ ತಂಬಾಕು ಸೇವನೆ, ಗುಟ್ಕಾ, ಸಿಗರೇಟು, ಬೀಡಿ ಸೇವನೆ ಮಾಡುವುದರಿಂದ ಬಾಯಿಯಲ್ಲಿ ಹುಣ್ಣಾಗಬಹುದು. ಅದು ಪ್ರಾಯಶಃ ಕ್ಯಾನ್ಸರ್ ಹುಣ್ಣಾಗಿರಬಹುದು. ಆದರೆ, ಮಾಮೂಲು ಅಂತಾ ತಪಾಸಣೆಗೆ ಹೆಚ್ಚಿನ ಜನರು ಮುಂದಾಗುವುದಿಲ್ಲ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕೋಶ, ಸ್ತನಕ್ಯಾನ್ಸರ್ ಬಗ್ಗೆಯೂ ಅನೇಕರಲ್ಲಿ ಮುಜುಗರಪಡುವುದನ್ನು ಕಾಣುತ್ತೇವೆ. ತಪಾಸಣೆ, ಚಿಕಿತ್ಸೆ ಅತಿ ಮುಖ್ಯ ಎಂಬ ಸಂಗತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಆರಾಧ್ಯ ಕ್ಯಾನ್ಸರ್ ಆಸ್ಪತ್ರೆಯಿಂದ ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸಲು ಅನೇಕ ಕಡೆ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸಲಾಗುತ್ತದೆ. ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ರೂಂ ನಂಬರ್ 18ರಲ್ಲಿ ಪ್ರತಿ ಸೋಮವಾರ ಹೊರ ರೋಗಿಗಳ ವಿಭಾಗದಲ್ಲಿ ಕೆಲಸ ಮಾಡುತ್ತದೆ. ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲೂ ಪ್ರತಿ ಸೋಮವಾರ, ಶುಕ್ರವಾರ ಒಪಿಡಿ ಇರುತ್ತದೆ ಎಂದು ಡಾ. ಅಜಯ್ ತಿಳಿಸಿದರು.
ಆಸ್ಪತ್ರೆಯ ಡಾ.ಅಮಿತ್,ಡಾ.ತೇಜಸ್, ಮಂಜುನಾಥ, ಡಾ.ವಿಘ್ನೇಶ್ ಇತರರು ಇದ್ದರು.- - -
ಕೋಟ್ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ, ಇಎಸ್‌ಐ ಸೌಲಭ್ಯ ಇದೆ. ಮಂಗಳೂರು, ಮಣಿಪಾಲ್ ಬೇರೆಡೆ ಹೋಗುವ ಬದಲು ನಮಲ್ಲೇ ಅತ್ಯಾಧುನಿಕ ಉಪಕರಣಗಳೊಂದಿಗೆ ಚಿಕಿತ್ಸೆ ನೀಡಲಾಗುವುದು. ಕ್ಯಾನ್ಸರ್‌ಪೀಡಿತರು ಈ ಅವಕಾಶದ ಸದುಪಯೋಗ ಪಡೆಯಬೇಕು- ಡಾ. ಅಜಯ್, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ
- - --8ಕೆಡಿವಿಜಿ2:
ದಾವಣಗೆರೆಯಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಡಾ.ಅಜಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.