ಧಾರವಾಡದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ, ಫಾರ್ಮಸಿ ಕಾಲೇಜು ಸದ್ಯದಲ್ಲೇ ಪ್ರಾರಂಭಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಡಾ. ವೀರೇಂದ್ರ ಹೆಗ್ಗಡೆ

| Published : Oct 25 2023, 01:15 AM IST / Updated: Oct 25 2023, 01:16 AM IST

ಧಾರವಾಡದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ, ಫಾರ್ಮಸಿ ಕಾಲೇಜು ಸದ್ಯದಲ್ಲೇ ಪ್ರಾರಂಭಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದಲ್ಲಿರುವ ಎಸ್.ಡಿ.ಎಮ್. ವೈದ್ಯಕೀಯ ವಿಶ್ವವಿದ್ಯಾಲಯ ದೇಶದಲ್ಲೇ ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಮಾನ್ಯತೆ ಪಡೆದಿದೆ. ಅಲ್ಲಿನ ವೈದ್ಯಕೀಯ ಕಾಲೇಜು ದೇಶದಲ್ಲೇ ಒಂಭತ್ತನೇ ಸ್ಥಾನದಲ್ಲಿದೆ. ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜು ಕೂಡಾ ನಿರ್ವಹಣೆಯ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶದಲ್ಲಿ ಉನ್ನತ ಶ್ರೇಣಿಯನ್ನು ಹೊಂದಿವೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು
ಬೆಳ್ತಂಗಡಿ: ಮೈಸೂರಿನಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ಹೊಸ ವಸ್ತುಸಂಗ್ರಹಾಲಯ, ಉಡುಪಿಯಲ್ಲಿ ಆಯುರ್ವೇದ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ, ಧಾರವಾಡದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಮತ್ತು ಫಾರ್ಮಸಿ ಕಾಲೇಜು ಸದ್ಯದಲ್ಲೇ ಪ್ರಾರಂಭವಾಗಲಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಅವರು ಧರ್ಮಸ್ಥಳದಲ್ಲಿ ಮಂಗಳವಾರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವದ ಸಮಾರಂಭದಲ್ಲಿ ಮಾತನಾಡಿ ಹೊಸ ಯೋಜನೆಗಳನ್ನು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ನಿತ್ಯೋತ್ಸವವಾಗಿದ್ದು ಇದರ ಜೊತೆಗೆ ಹೊಸ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಧಾರವಾಡದಲ್ಲಿರುವ ಎಸ್.ಡಿ.ಎಮ್. ವೈದ್ಯಕೀಯ ವಿಶ್ವವಿದ್ಯಾಲಯ ದೇಶದಲ್ಲೇ ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಮಾನ್ಯತೆ ಪಡೆದಿದೆ. ಅಲ್ಲಿನ ವೈದ್ಯಕೀಯ ಕಾಲೇಜು ದೇಶದಲ್ಲೇ ಒಂಭತ್ತನೇ ಸ್ಥಾನದಲ್ಲಿದೆ. ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜು ಕೂಡಾ ನಿರ್ವಹಣೆಯ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶದಲ್ಲಿ ಉನ್ನತ ಶ್ರೇಣಿಯನ್ನು ಹೊಂದಿವೆ ಎಂದರು. ತಮ್ಮ ಸಂಸದರ ನಿಧಿಯಿಂದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು. ಹಾಲು ಮತ್ತು ಹಣ್ಣು ನಿತ್ಯ ಆದಾಯ ಕೊಡುವ ಮೂಲಗಳಾಗಿದ್ದು ಇವುಗಳ ಉತ್ಪಾದನೆಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು. ಧರ್ಮಸ್ಥಳದಲ್ಲಿ ಮೂರು ಹೊಸ ಕಲ್ಯಾಣಮಂಟಪಗಳನ್ನು ನಿರ್ಮಿಸಲಾಗುವುದು. ರಜತಾದ್ರಿ ವಸತಿಗೃಹಕ್ಕೆ 200 ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಅಳಿವಿನಂಚಿನಲ್ಲಿರುವ ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು. ಈಗ ನಾವು ಕ್ಷಿಪ್ರ ಪರಿವರ್ತನಾ ಯುಗದಲ್ಲಿರುವುದರಿಂದ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಕೆಲಸಗಳು ವೇಗದ ಗತಿಯಲ್ಲಿ ನಡೆಯುತ್ತಿವೆ,. ಸ್ಫೂರ್ತಿಯ ಚಿಲುಮೆಯಾದ ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ವಲ್, ಸಾಕೇತ ಶೆಟ್ಟಿ, ಶ್ರುತಾಜಿತೇಶ್ ಮತ್ತು ಮೈತ್ರಿ ನಂದೀಶ್ ಅವರು ಬಹಳ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ರಾಜೇಂದ್ರ ಕುಮಾರ್, ಡಾ. ನಿರಂಜನ್ ಕುಮಾರ್ ಮತ್ತು ಪದ್ಮಲತಾ ನಿರಂಜನ್ ಕುಮಾರ್ ಅವರ ಸಹಾಯ ಸಹಕಾರವನ್ನು ಹೆಗ್ಗಡೆಯವರು ಉಲ್ಲೇಖಿಸಿದರು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಕಾರ್ಯಕರ್ತರು ಮತ್ತು ಸಿಬ್ಬಂದಿಯ ನಿಷ್ಠೆ ಮತ್ತು ಕಾರ್ಯತತ್ಪರತೆಯಿಂದ ತನ್ನ ಎಲ್ಲಾ ಯೋಜನೆಗಳು ಮತ್ತು ಯೋಚನೆಗಳು ಯಶಸ್ವಿಯಾಗುತ್ತಿರುವುದಕ್ಕೆ ಸಂತೋಷ ಮತ್ತು ತೃಪ್ತಿ ವ್ಯಕ್ತಪಡಿಸಿದ ಹೆಗ್ಗಡೆಯವರು ಎಲ್ಲವುಗಳ ಕೀರ್ತಿ ಮತ್ತು ಯಶಸ್ಸನ್ನು ಶ್ರೀ ಮಂಜುನಾಥ ಸ್ವಾಮಿ ಮತ್ತು ಧರ್ಮದೇವತೆಗಳ ಸಾನ್ನಿಧ್ಯಕ್ಕೆ ಅರ್ಪಿಸುವುದಾಗಿ ಧನ್ಯತೆಯಿಂದ ನುಡಿದರು. ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ವಿಸ್ತರಣೆಯಲ್ಲಿ ಪ್ರೊ.ಎಸ್. ಪ್ರಭಾಕರ್ ಅವರ ಸಲಹೆ ಮತ್ತು ಸಹಕಾರವನ್ನು ಹೆಗ್ಗಡೆಯವರು ವಿಶೇಷವಾಗಿ ಉಲ್ಲೇಖಿಸಿದರು. ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ್, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮತ್ತು ಇತ್ತೀಚೆಗೆ ನಿಧನರಾದ ಕಟ್ಟಡ ಕಾಮಗಾರಿ ವಿಭಾಗದ ಗೋಪಾಲ್ ಮೆನನ್ ಅವರ ಸೇವೆಯನ್ನು ಸ್ಮರಿಸಿದ ಹೆಗ್ಗಡೆಯವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶಾಸಕ ಕೆ. ಹರೀಶ್ ಪೂಂಜ ಮಾತನಾಡಿ, ಹೆಗ್ಗಡೆಯವರ ಬಹುಮುಖಿ ಸಮಾಜಸೇವೆಯಿಂದಾಗಿ ಬೆಳ್ತಂಗಡಿ ತಾಲೂಕು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಹೆಗ್ಗಡೆಯವರ ಎಲ್ಲಾ ಯೋಚನೆಗಳು ಹಾಗೂ ಯೋಜನೆಗಳು ಆದರ್ಶ ಮತ್ತು ಅನುಕರಣೀಯವಾಗಿವೆ ಎಂದು ಹೇಳಿ ಅಭಿನಂದಿಸಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಅಭಿನಂದಿಸಿದರು. ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್. ಸುಪ್ರಿಯಾಹರ್ಷೇಂದ್ರ ಕುಮಾರ್. ಡಿ. ರಾಜೇಂದ್ರ ಕುಮಾರ್ ಮತ್ತು ನೀತಾ ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಅಮಿತ್ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ಧನ್ಯವಾದವಿತ್ತರು. ಎಸ್.ಡಿ.ಎಮ್. ಸನಿವಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನಿಲ್‍ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ), ವಸತಿಛತ್ರಗಳನ್ನು ಆಕರ್ಷಕ ವಿನ್ಯಾಸದಿಂದ ಸಿಂಗರಿಸಲಾಗಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ. ಊರಿನ ನಾಗರಿಕರು, ಅಭಿಮಾನಿಗಳು ಮತ್ತು ಭಕ್ತರಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ. ಅಭಿಮಾನಿಗಳು ಹಣ್ಣು-ಹಂಪಲು, ಹೂವಿನ ಹಾರ ಅರ್ಪಿಸಿ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡಿದರು. ಹೆಗ್ಗಡೆಯವರು ಎಲ್ಲರ ಯೋಗ-ಕ್ಷೇಮ ವಿಚಾರಿಸಿ ಶುಭ ಹಾರೈಸಿದರು. ಗಣ್ಯರಿಂದ ಗೌರವಾರ್ಪಣೆ: ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದಸರಸ್ವತಿ ಸ್ವಾಮೀಜಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆ. ರಾಜವರ್ಮ ಬಳ್ಳಾಲ್, ಮಂಗಳೂರು, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್‍ಸಾಮ್ರಾಜ್ಯ ಶಿರ್ತಾಡಿ, ಮಂಗಳೂರಿನ ಕೆ. ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಕಿನ್ನಿಗೋಳಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರಿನ ಜೈನ್ ಟ್ರಾವೆಲ್ಸ್ ಮಾಲಕ ಕೆ. ರತ್ನಕಾರ ಜೈನ್, ವಕೀಲ ಎಮ್.ಆರ್. ಬಳ್ಳಾಲ್ ಮೊದಲಾದವರು ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದರು.