ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಒಂದಾಗಿ ಚುನಾವಣೆ ಎದುರಿಸಿ: ಸಂಸದ ಎಂ.ಮಲ್ಲೇಶಬಾಬು

| Published : Sep 25 2025, 01:00 AM IST

ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಒಂದಾಗಿ ಚುನಾವಣೆ ಎದುರಿಸಿ: ಸಂಸದ ಎಂ.ಮಲ್ಲೇಶಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸ್ಥಳೀಯ ಶಾಸಕರು ಬೆಂಬಲವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲಿಸುವರು, ನಾವು ಹೇಗೆ ಎಂದು ಆತಂಕಪಡಬೇಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿಲ್ಲದಿದ್ದರೂ ಸಹ ಕೇಂದ್ರ ಸರ್ಕಾರ ನಮ್ಮದೇ ಆಗಿರುವುದರಿಂದ ಕೇಂದ್ರ ಸರ್ಕಾರದ ಸಾಧನೆಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಚುನಾವಣೆ ಎದುರಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಅಕ್ಟೋಬರ್ ೧೨ರಂದು ನಡೆಯಲಿರುವ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರು, ಮುಖಂಡರು ಒಂದಾಗಿ ಭಿನ್ನಮತವಿಲ್ಲದೆ ಚುನಾವಣೆ ಎದುರಿಸಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಬೇಕು ಎಂದು ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.

ಪಟ್ಟಣದ ಎಸ್.ವಿ.ಆರ್.ಕಲ್ಯಾಣ ಮಂಟಪದಲ್ಲಿ ಟಿಎಪಿಸಿಎಂಎಸ್ ಚುನಾವಣೆ ಹಿನ್ನೆಲೆ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದುಡ್ಡೊಂದೆ ಚುನಾವಣೆಗೆ ಮಾನದಂಡವಲ್ಲ, ಪಕ್ಷಗಳ ಸಿದ್ಧಾಂತ, ವ್ಯಕ್ತಿಯ ಹಿನ್ನೆಲೆ ಸಹ ಮಾನದಂಡವಾಗಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗಿ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಶ್ರಮಿಸಿದರೆ ಆಡಳಿತ ಮಂಡಳಿಯನ್ನು ವಶಪಡಿಸಿಕೊಳ್ಳಲು ಸುಲಭವಾಗಲಿದೆ ಎಂದರಲ್ಲದೆ, ಈ ಚುನಾವಣೆಯನ್ನು ಗೆದ್ದರೆ ಮುಂದೆ ಬರುವ ಜಿಪಂ, ತಾಪಂ ಚುನಾವಣೆಯನ್ನು ಗೆಲ್ಲಲು ದಾರಿ ಸುಗಮವಾಗಲಿದೆ ಎಂದು ಎರಡೂ ಪಕ್ಷಗಳ ಮುಖಂಡರಿಗೆ ಕಿವಿ ಮಾತು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸ್ಥಳೀಯ ಶಾಸಕರು ಬೆಂಬಲವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲಿಸುವರು, ನಾವು ಹೇಗೆ ಎಂದು ಆತಂಕಪಡಬೇಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿಲ್ಲದಿದ್ದರೂ ಸಹ ಕೇಂದ್ರ ಸರ್ಕಾರ ನಮ್ಮದೇ ಆಗಿರುವುದರಿಂದ ಕೇಂದ್ರ ಸರ್ಕಾರದ ಸಾಧನೆಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಚುನಾವಣೆ ಎದುರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಮಾರ್ಕಂಡೇಗೌಡ, ಸೀತಾರಾಮಪ್ಪ, ಶಿವಕುಮಾರ್, ಹನುಮಂತು, ಎಂ.ಜಿ.ಪ್ರಕಾಶ್ ಇತರರು ಇದ್ದರು.