ಸಾರಾಂಶ
ಈ ಭೀಕರ ಅಪರಾಧವನ್ನು ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಕಾಶ್ಮೀರದ ಪಹಲ್ಗಾಂ ಹತ್ಯಾಕಾಂಡ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿಯವರು ನಗರದ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಸಂಜೆ ಪ್ರತಿಭಟಿಸಿದರು.ಇದೇ ವೇಳೆ ಭಯೋತ್ಪಾದಕರ ದಾಳಿಯಲ್ಲಿ ಹತರಾದ ಅಮಾಯಕರಿಗೆ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿಸಿ ಸಲ್ಲಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದಕರಿಂದ 26 ಪ್ರವಾಸಿಗರ ಬರ್ಬರ ಹತ್ಯೆ ಅಮಾನವೀಯ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ಅಮಾಯಕರ ಕುಟುಂಬಗಳಿಗೆ ಸಂತಾಪಗಳನ್ನು ತಿಳಿಸಿದರು. ಈ ದಾಳಿಯಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಈ ಭೀಕರ ಅಪರಾಧವನ್ನು ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಪೊಲೀಸ್ ಮತ್ತು ಭದ್ರತಾ ಪಡೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿರುವುದರಿಂದ, ಅದು ಈ ಗೋರ ಕೃತ್ಯಕ್ಕೆ ಹೊಣೆಗಾರರಾಗಿರುವ ಶಕ್ತಿಗಳನ್ನು ಶಿಕ್ಷಿಸಲು ಕೈಲಾದ್ದನ್ನೆಲ್ಲವನ್ನೂ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಈ ಅಪರಾಧವನ್ನು ಎಸಗಿದವರು ದೇಶದ ಶತ್ರುಗಳು, ಅದಕ್ಕಿಂತಲೂ ಹೆಚ್ಚಾಗಿ ಕಾಶ್ಮೀರದ ಜನತೆಯ ಶತ್ರುಗಳು. ಕೇಂದ್ರ ಸರ್ಕಾರ ದಾಳಿಯ ಬಗ್ಗೆ ಎಲ್ಲಾ ಕೋನಗಳಿಂದಲೂ, ಜನನಿಬಿಡ ಪ್ರವಾಸಿ ತಾಣಗಳಲ್ಲಿ ಭದ್ರತೆಯ ಲೋಪವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮುಖಂಡರಾದ ಎನ್. ಸುಬ್ರಹ್ಮಣ್ಯ, ರಾಜೇಂದ್ರ, ಮೆಹಬೂಬ್, ಜಿ. ಜಯರಾಂ, ಬಾಲಾಜಿರಾವ್, ಬಲರಾಂ, ಲ. ಜಗನ್ನಾಥ್, ವಿನಾಯಕ, ಸುಬ್ರಹ್ಮಣ್ಯ, ಕೃಷ್ಣಪ್ಪ, ಪ್ರಗತಿಪರರಾದ ಭೂಮಿಗೌಡ, ಗೋಪಿನಾಥ್, ಬಾಬುರಾಜ್, ಶ್ರೀಕಾಂತ್ ಮೊದಲಾದವರು ಇದ್ದರು.