ಸಾರಾಂಶ
ಶಾಂತಳ್ಳಿ ಕ್ಲಸ್ಟರ್ ಮಟ್ಟದ 1ರಿಂದ 7ನೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬ ನಡೆಯಿತು. ಈ ಸಂದರ್ಭ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶಾಂತಳ್ಳಿ ಕ್ಲಸ್ಟರ್ ಮಟ್ಟದ 1 ರಿಂದ 7ನೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬ ಶಾಲಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶಾಂತಳ್ಳಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರಪ್ಪ ಮಾತನಾಡಿ, ಮಕ್ಕಳಲ್ಲಿ ಕಲಿಕೆ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಸರ್ಕಾರ ನಡೆಸುತ್ತಿದೆ. ಇದರಿಂದ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗುವುದು. ವಿದ್ಯಾರ್ಥಿಗಳು ತರಗತಿ ಒಳಗಡೆ ಕುಳಿತು ಕಲಿಯುವುದಕ್ಕಿಂತಲೂ, ಶಾಲಾ ಹೊರಗೆ ಕಲಿಯಲು ಸಾಕಷ್ಟು ವಿಷಯಗಳಿರುತ್ತವೆ. ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಸಂತೋಷದಿಂದ ಪಾಲ್ಗೊಂಡು ಕಲಿಯಲು ಎಲ್ಲರೂ ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ವಿಜಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ವಹಿಸಿದ್ದರು. ಶಾಲಾ ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ಉತ್ತಯ್ಯ, ಮಧುಕುಮಾರ್, ಬೆಟ್ಟದಳ್ಳಿ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ, ತೋಳೂರುಶೆಟ್ಟಳ್ಳಿ ಶಾಲಾ ಮುಖ್ಯ ಶಿಕ್ಷಕಿ ವಾರಿಜಾಮಣಿ, ಚಿಕ್ಕತೋಳೂರು ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಸೋಮವಾರಪೇಟೆ ಕ್ಲಸ್ಟರ್ ಸಿಆರ್‌ಪಿ ಪ್ರೇಮ, ಶಾಂತಳ್ಳಿ ಕ್ಲಸ್ಟರ್ ಸಿಆರ್‌ಪಿ ಚೈತ್ರ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಗೆ ಗಟ್ಟಿಯಾಗಿ ಓದುವುದು, ಶುದ್ಧ ಬರಹ, ಜ್ಞಾಪಕ ಶಕ್ತಿ ಪರೀಕ್ಷೆ, ಸಂತೋಷದಾಯಕ ಗಣಿತ ಕಲಿಕೆ, ರಸಪ್ರಶ್ನೆ, ಕಥೆ ಕಟ್ಟುವುದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.