ಕ್ರಷರ್‌ ಮಾಲೀಕರು, ಟಿಪ್ಪರ್ ಮಾಲೀಕರಿಂದ ರಾಜಧನ ವಂಚನೆ

| Published : Aug 25 2025, 01:00 AM IST

ಕ್ರಷರ್‌ ಮಾಲೀಕರು, ಟಿಪ್ಪರ್ ಮಾಲೀಕರಿಂದ ರಾಜಧನ ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲ ಕ್ರಷರ್‌ ಮಾಲೀಕರ ಆಮಿಷಕ್ಕೆ ಖನಿಜ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರೀಕಾಟಿ ಬಳಿಯ ಕೆಲ ಕ್ರಷರ್‌ ನ ಉತ್ಪನ್ನಗಳನ್ನು ಓವರ್‌ ಲೋಡ್‌ ತುಂಬಿದ ಟಿಪ್ಪರ್‌ ಗಳನ್ನು ತಡೆಯೋದೇ ಇಲ್ಲ. ತಡೆದರೆ ಕೆಲ ಕ್ರಷರ್‌ ಮಾಲೀಕರು ಅವಾಜ್‌ ಹಾಕುತ್ತಾರೆ ಎಂಬ ಆರೋಪವೂ ಇದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಸ್ತುವಾರಿಯಲ್ಲಿ ಸ್ಥಾಪಿತಗೊಂಡಿರುವ ಖನಿಜ ತನಿಖಾ ಠಾಣೆಯ ಮುಂದೆ ಹಾದು ಹೋಗುವ ಬಹುತೇಕ ಟಿಪ್ಪರ್‌ಗಳು ನಿಲ್ಲಲ್ಲ, ಹೋಂ ಗಾರ್ಡ್‌ ತಡೆಯಲ್ಲ, ತಡೆದ್ರೂ ಟಿಪ್ಪರಗಳೇ ನಿಲ್ಲಿಸಲ್ಲ!

ಮೈಸೂರು- ಊಟಿ ಹೆದ್ದಾರಿಯ, ತಾಲೂಕಿನ ಹಿರೀಕಾಟಿ ಗೇಟ್‌ ಬಳಿಯ ಖನಿಜ ತನಿಖಾ ಠಾಣೆಯಲ್ಲಿ ಹೋಂ ಗಾರ್ಡ್‌ಗಳೇ ತಪಾಸಣಾ ಅಧಿಕಾರಿ! ಹೋಂ ಗಾರ್ಡ್‌ ಗಳು ಖನಿಜ ತನಿಖಾ ಠಾಣೆ ಮುಂದೆ ನಿಂತಿದ್ದರೂ ಟಿಪ್ಪರ್‌ ಗಳು ಎಂಡಿಪಿ ಹಾಗೂ ರಾಯಲ್ಟಿ ಚೀಟಿ ತೋರಿಸಿ ತೆರಳಬೇಕು. ಆದರೆ, ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿ ಕರ್ತವ್ಯ ಲೋಪದಿಂದಾಗಿ ಟಿಪ್ಪರ್‌ ಗಳು ನಿಲ್ಲಿಸದೇ ತೆರಳುತ್ತಿವೆ, ಈ ಖನಿಜ ತನಿಖಾ ಠಾಣೆ ಬೇಕಾ ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ.ನಿಲ್ಲದ ಟಿಪ್ಪರ್ ಗಳು:

ಕೆಲ ಸಮಯ ಖನಿಜ ತನಿಖಾ ಠಾಣೆಗೆ ನೇಮಕಗೊಂಡ ಹೋಂ ಗಾರ್ಡ್‌ಗಳು ಟಿಪ್ಪರ್‌ಗಳನ್ನು ತಡೆದರೂ ಬಹುತೇಕ ಟಿಪ್ಪರ್‌ ಗಳು ನಿಲ್ಲಿಸುತ್ತಿಲ್ಲ. ಹಿರೀಕಾಟಿ ಭಾಗದ ಕ್ರಷರ್‌ಗೆ ಸೇರಿದ ಟಿಪ್ಪರ್‌ ಗಳು ಎಕ್ಸ್‌ಪ್ರೆಸ್‌ ಸಾರಿಗೆ ಬಸ್‌ ನಂತೆ ಸ್ಪೀಡಾಗಿ ತೆರಳುತ್ತಿವೆ.

ತಾಲೂಕಿನಲ್ಲಿ ಕ್ವಾರಿ, ಕ್ರಷರ್‌ ಗಳಿಗೇನು ಬರವಿಲ್ಲ, ಅದರಲ್ಲೂ ಬೇಗೂರು ಹೋಬಳಿಯಂತೂ ಕ್ವಾರಿಗಳು, ಕ್ರಷರ್‌ಗಳ ತಾಣವಾಗಿದ್ದು, ಕ್ವಾರಿಯ ರಾ ಮೆಟಿರಿಯಲ್‌, ಕ್ರಷರ್‌ನ ಉತ್ಪನ್ನಗಳು ತೋರಿಕೆ ಪರ್ಮೀಟ್‌ ಹಾಕಿ ನಾಲ್ಕೈದು ಟ್ರಿಪ್‌ ಕಲ್ಲು ಅಕ್ರಮವಾಗಿ ಕ್ರಷರ್‌ ನ ಬಾಯಿಗೆ ಹೋಗುತ್ತಿವೆ.

ಇನ್ನು ಹಗಲು- ರಾತ್ರಿ ಎನ್ನದೆ ಓವರ್‌ ಲೋಡ್‌ ತುಂಬಿದ ಟಿಪ್ಪರ್‌ಗಳು ಮೈಸೂರು ಕಡೆಯತ್ತ ರಾಜಾರೋಷವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಕಾಣದಂತೆ ಕುಳಿತಿದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಕ್ರಷರ್ ಮಾಲೀಕರ ಆಮಿಷ:

ಕೆಲ ಕ್ರಷರ್‌ ಮಾಲೀಕರ ಆಮಿಷಕ್ಕೆ ಖನಿಜ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರೀಕಾಟಿ ಬಳಿಯ ಕೆಲ ಕ್ರಷರ್‌ ನ ಉತ್ಪನ್ನಗಳನ್ನು ಓವರ್‌ ಲೋಡ್‌ ತುಂಬಿದ ಟಿಪ್ಪರ್‌ ಗಳನ್ನು ತಡೆಯೋದೇ ಇಲ್ಲ. ತಡೆದರೆ ಕೆಲ ಕ್ರಷರ್‌ ಮಾಲೀಕರು ಅವಾಜ್‌ ಹಾಕುತ್ತಾರೆ ಎಂಬ ಆರೋಪವೂ ಇದೆ.

ಅಲ್ಲದೆ ಹಿರೀಕಾಟಿ, ತೊಂಡವಾಡಿ, ಅರೇಪುರ ಸುತ್ತ ಮುತ್ತಲಿನ ಕ್ವಾರಿಯಿಂದ ಟಿಪ್ಪರ್‌ ಗಳಲ್ಲಿ ಬರುವ ಬೋಡ್ರೆಸ್‌ ಕಲ್ಲಿನಲ್ಲಿ ಶೇ.೯೦ ರಷ್ಟು ಕಲ್ಲು ರಾಯಲ್ಟಿ ಇಲ್ಲದೆ ಕ್ರಷರ್‌ ಬಾಯಿಗೆ ಹೋಗುತ್ತಿದೆ.

ಕ್ರಮವಹಿಸದ ಪೊಲೀಸರು:

ಬೇಗೂರು, ತೆರಕಣಾಂಬಿ ಪೊಲೀಸ್‌ ಠಾಣಾ ಸರಹದ್ದು ಹಾಗೂ ಠಾಣೆಯ ಮುಂದೆಯೇ ಓವರ್‌ ಲೋಡ್‌ ತುಂಬಿದ ಕಲ್ಲು, ಎಂ.ಸ್ಯಾಂಡ್‌, ಜಲ್ಲಿ ಯಾವುದೇ ಸುರಕ್ಷತಾ ಕ್ರಮ ವಹಿಸದೆ ತೆರಳುತ್ತಿದ್ದರೂ ಪೊಲೀಸರು ಮಾತ್ರ ತಡೆದು ಕೇಳುತ್ತಿಲ್ಲ, ಕೇಳಲು ಆಗುತ್ತಿಲ್ಲ. ಕಾರಣ ಕ್ರಷರ್‌ ಹಾಗೂ ಕ್ವಾರಿ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ.

ಸ್ಥಳೀಯ ಪೊಲೀಸ್‌ ಅಧಿಕಾರಿಗಳು ನಾವು ತಡೆಯಂಗಿಲ್ಲ ಎಂದು ಸಾರ್ವಜನಿಕರಿಗೇ ಹೇಳುತ್ತಾರೆ. ಪೊಲೀಸರದು ಇದ್ಯಾವ ನ್ಯಾಯ ಎಂಬ ಪ್ರಶ್ನೆ ಸಹಜವಾಗಿ ಹೇಳುತ್ತಿದೆ.

ಜಿಲ್ಲಾಡಳಿತ ವಿಫಲ:

ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ಠಾಣಾ ಸರಹದ್ದು ಹಾಗೂ ಠಾಣೆಗಳ ಮುಂದೆಯೇ ಓವರ್‌ ಲೋಡ್‌ ತುಂಬಿದ ಟಿಪ್ಪರ್ ಹಗಲು ರಾತ್ರಿ ಎನ್ನದೆ ಸಂಚರಿಸುತ್ತಿವೆ. ಇದನ್ನು ಕೇಳಿ ದಂಡ, ಕೇಸು ಹಾಕುವ ಕೆಲಸವನ್ನಾದರೂ ಜಿಲ್ಲಾಡಳಿತ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ಮೇಲೆ ಸಚಿವರಿಗೆ ಹಿಡಿತ ಇಲ್ವಾ?:

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ. ಜಿಲ್ಲೆಯ ಅಧಿಕಾರಿಗಳ ಮೇಲೆ ಹಿಡಿತವಿಲ್ಲ, ಜೊತೆಗೆ ಅಕ್ರಮ ಕಲ್ಲು ಹಾಗೂ ಉಪ ಖನಿಜ ಉತ್ಪನ್ನಗಳ ಕದ್ದು ಸಾಗಾಣಿಕೆ ಆಗುತ್ತಿದ್ದರೂ ಅಧಿಕಾರಿಗಳನ್ನು ಕೇಳುವ ವ್ಯವದಾನವೂ ಇಲ್ಲ. ಆದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಧನ ಹಾಗೂ ಜಿಎಸ್‌ಟಿ ವಂಚಿಸಲು ಸಾಧ್ಯವಾಗಿದೆ.

-ಮಹದೇವಪ್ಪ, ಜಿಲ್ಲಾ ರೈತಸಂಘ