ಕಾರು, ಆಟೋ ಮಾಲಕರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ!

| Published : Jan 19 2025, 02:16 AM IST

ಕಾರು, ಆಟೋ ಮಾಲಕರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ!
Share this Article
  • FB
  • TW
  • Linkdin
  • Email

ಸಾರಾಂಶ

ಆಟೋ ಮತ್ತು ಕಾರು ಮಾಲಕರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸ್ ಇಲಾಖೆ ಆನ್‌ಲೈನ್ ಮೂಲಕ ದಂಡ ವಿಧಿಸಿರುವ ವಿಚಿತ್ರ ಘಟನೆ ನಡೆದಿದ್ದು, ವಾಹನ ಮಾಲಕರು ಆನ್‌ಲೈನ್ ಸಂದೇಶ ನೋಡಿ ಬೆರಗಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಆಟೋ ಮತ್ತು ಕಾರು ಮಾಲಕರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸ್ ಇಲಾಖೆ ಆನ್‌ಲೈನ್ ಮೂಲಕ ದಂಡ ವಿಧಿಸಿರುವ ವಿಚಿತ್ರ ಘಟನೆ ನಡೆದಿದ್ದು, ವಾಹನ ಮಾಲಕರು ಆನ್‌ಲೈನ್ ಸಂದೇಶ ನೋಡಿ ಬೆರಗಾಗಿದ್ದಾರೆ.ನೆಲ್ಯಹುದಿಕೇರಿಯ ಟಿಪ್ಪರ್ ಚಾಲಕ ವಿಠಲ ಎಂಬವರು ಡಿ.7ರಂದು ಪಿರಿಯಾಪಟ್ಟಣ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದಾಗಿ ಆರೋಪಿಸಿ ಡಿ.25ರಂದು ವಿಠಲ ಅವರ ಮೊಬೈಲ್‌ ಸಂಖ್ಯೆಗೆ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ದಂಡ ಪಾವತಿಸುವಂತೆ ಸಂದೇಶ ಬಂದಿದೆ. ಸಂದೇಶದಲ್ಲಿ ವಿಠಲ ಅವರ ಮಾರುತಿ ಓಮ್ನಿ ವಾಹನದ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ.

ಹಾಗೇಯೇ ಸಿದ್ದಾಪುರದ ಆಟೋ ಚಾಲಕ ಶಾನವಾಸ್ ಮತ್ತು ನೆಲ್ಯಹುದಿಕೇರಿ ಹಂಸ ಎಂಬವರಿಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದಾಗಿ ಆಟೋ ರಿಕ್ಷಾದ ಸಂಖ್ಯೆ ಸಹಿತ ಸಂದೇಶ ಬಂದಿದೆ. ಶಾನವಾಸ್ ಡಿ.21 ಮತ್ತು ಜ.12ರಂದು ಎರಡು ಬಾರಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದು, ಒಂದು ಸಾವಿರ ರುಪಾಯಿ ದಂಡ ಪಾವತಿಸುವಂತೆ ಮತ್ತು ಹಂಸ ಎಂಬವರು ಡಿ.27ರಂದು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದು, 500 ರು. ದಂಡ ಪಾವತಿಸುವಂತೆ ಸಂದೇಶದಲ್ಲಿದೆ.ಸಂದೇಶದಲ್ಲಿರುವಂತೆ ನಾವುಗಳು ಪಿರಿಯಾಪಟ್ಟಣಕ್ಕೆ ತೆರಳಿಲ್ಲ ಹಾಗೂ ಉಲ್ಲೇಖಿಸಿದ ವಾಹನ‌ ಸಂಖ್ಯೆಯಲ್ಲಿ ದ್ವಿಚಕ್ರ ಹೊಂದಿಲ್ಲ ಎಂದು ಶಾನವಾಸ್, ಹಂಸ ಹಾಗೂ ವಿಠಲ ಹೇಳಿದ್ದು, ಪೊಲೀಸ್ ಇಲಾಖೆಯ ಎಡವಟ್ಟಿನಿಂದ ನಾವುಮಾಡದ ತಪ್ಪಿಗೆ ಯಾಕಾಗಿ ದಂಡ ಪಾವತಿಸಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.