ಸಾರಾಂಶ
ಬೇಲೂರು: ಬೇಲೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಕನಾಯಕನಹಳ್ಳಿ ಬಳಿ ಕಿರೇಹಳ್ಳಿ ಗಡಿ ಹತ್ತಿರ ಕೆಎಸ್ ಅರ್ ಟಿಸಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರಿಗೆ ತೀವ್ರ ಪೆಟ್ಟಾಗಿದೆ. ದಾವಣಗೆರೆಯ ಚೇತನ್ , ನಾಗರಾಜ್, ಪುನೀತ್, ಚೇತನ್ ಎಂಬುವರು ಪ್ರವಾಸಕ್ಕೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಂದ ವಾಪಸ್ಸು ಚಿಕ್ಕಮಗಳೂರು ಮಾರ್ಗವಾಗಿ ದಾವಣಗೆರೆ ಹೋಗುವಾಗ ಚಿಕ್ಕಮಗಳೂರಿನಿಂದ ಬೇಲೂರಿಗೆ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಚೇತನ್, ನಾಗರಾಜ್ ಹಾಗೂ ಚೇತನ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಬಸ್ ನಲ್ಲಿದ್ದ ಕಂಡಕ್ಟರ್ ಗೂ ಸಹ ಕಣ್ಣಿಗೆ ತೀವ್ರ ಗಾಯವಾಗಿದ್ದು, ಅವರಿಗೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಯಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಬೇಲೂರು ಪೊಲೀಸ್ ಠಾಣೆಯ ಪಿಎಸ್ಐ ಶಂಕ್ರಪ್ಪ ಹಾಗು ಸಿಬ್ಬಂದಿ ತೆರಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.