ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬೈಕ್ ಗೆ ಕಾರು ಡಿಕ್ಕಿಯಾಗಿ ಅಜ್ಜಿ, ಮೊಮ್ಮಗ ಮೃತಪಟ್ಟು ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.ತಾಲೂಕಿನ ಹೊಸಬೂದನೂರು ಗ್ರಾಮದ ನಿವಾಸಿ ಚಿನ್ನಮ್ಮ(68), ಈಕೆಯ ಮೊಮ್ಮಗ ಬಿ.ಎಂ.ರಾಜೀವ(17) ಮೃತರು. ಈತನ ಸ್ನೇಹಿತ ಕಟ್ಟೇದೊಡ್ಡಿ ಗ್ರಾಮದ ನೇಮಿಚಂದ(17) ಗಾಯಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನ ಸ್ಥಿತಿ ಕೂಡ ಚಿಂತಾಜನಕವಾಗಿದೆ.ಕಾರಿನ ಕೆಳಗೆ ಸಿಲುಕಿದ ಯುವಕನನ್ನು ಕಾರು ಸುಮಾರು 200 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿ ಚಾಲಕ ಅಮಾನವೀಯತೆ ಮೆರೆದಿದ್ದಾನೆ.ಮೃತರು ಮತ್ತು ಗಾಯಾಳುಗಳು ಬೈಕ್‌ನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಂಡ್ಯ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಸ್ಯಾಂಟ್ರೋ ಕಾರು ಡಿಕ್ಕಿಯಾಗಿದೆ. ಈ ವೇಳೆ ರಾಜೀವ ಕಾರಿನ ಮುಂಭಾಗಕ್ಕೆ ಸಿಲುಕಿದ್ದಾನೆ. ಆಗ ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಸುಮಾರು 200 ಮೀಟರ್ ದೂರದವರೆಗೆ ರಾಜೀವನ ದೇಹವನ್ನು ಎಳೆದುಕೊಂಡು ಹೋಗಿದ್ದಾನೆ. ಬಳಿಕ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ರಾಜೀವನ ದೇಹ ಕಾರಿನಿಂದ ಪಕ್ಕಕ್ಕೆ ಬಿದ್ದ ಬಳಿಕ ಕಾರಿನ ವೇಗವನ್ನು ಹೆಚ್ಚಿಸಿದ್ದಾನೆ. ಈ ವೇಳೆ ಹಿಂದೆ ಬರುತ್ತಿದ್ದ ಮತ್ತೊಂದು ಕಾರಿನ ಪ್ರಯಾಣಿಕರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರನ್ನು ಹಿಡಿಯುವ ಸಲುವಾಗಿ ನಗರದ ಫ್ಯಾಕ್ಟರಿ ಸರ್ಕಲ್‌ವರೆಗೆ (ಬಿ.ಜಿ.ದಾಸೇಗೌಡ ವೃತ್ತ) ಹಿಂಬಾಲಿಸಿದ್ದಾರೆ. ಆದರೆ, ಕಾರು ಚಾಲಕ ಗುತ್ತಲು ರಸ್ತೆಗೆ ಕಾರು ತಿರುಗಿಸಿ ವಾಹನಗಳ ದಟ್ಟಣೆ ನಡುವೆ ಕಣ್ಮರೆಯಾಗಿದ್ದಾನೆ. ಯಾವ ಕಡೆಗೆ ಆತ ಹೋಗಿದ್ದಾನೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ, ಹಿಂದಿನಿಂದ ಬರುತ್ತಿದ್ದ ಕಾರಿನ ಪ್ರಯಾಣಿಕರು ಮಾಡಿದ್ದ ವೀಡಿಯೋ ಮೂಲಕ ಕಾರಿನ ನಂಬರ್‌ನ್ನು ತಿಳಿದು ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರತಿಭಾನ್ವಿತ ವಿದ್ಯಾರ್ಥಿಅಪಘಾತದಲ್ಲಿ ಮೃತಪಟ್ಟ ಬಿ.ಎಂ.ರಾಜೀವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಕಳೆದ ವರ್ಷ ಶೇ.96 ರಷ್ಟು ಅಂಕ ಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದನು. ಪ್ರಸ್ತುತ ನಗರದ ಅಭಿನವ ಭಾರತಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.