ಸಾರಾಂಶ
ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟ ಘಟನೆ ಇಲ್ಲಿಯ ಸವಣೂರು ರಸ್ತೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ನಡೆದಿದೆ.
ಶಿಗ್ಗಾಂವಿ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟ ಘಟನೆ ಇಲ್ಲಿಯ ಸವಣೂರು ರಸ್ತೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ನಡೆದಿದೆ.
ನೀಲಪ್ಪ ಮೂಲಿಮನಿ (೩೦), ದೀಪಕ್ ಕೋಟಿ (೧೮) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಕಲ್ಮೇಶ್ ಮಾನೋಜಿ (೨೬), ಶಿವನಗೌಡ ಎಲ್ಲನಗೌಡ (೨೬) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಸಚಿನ್ ಎಮ್ಮಿ (೨೧), ನಾಗರಾಜ ಎಮ್ಮಿ (೨೬), ವಿನಯ್ ನಾಗನೂರು (೨೦) ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದವರು. ಚಾಲಕ ಕಲ್ಮೇಶ ಕಲ್ಯಾಣ ಗ್ರಾಮದವನು.
ಇಂದು ಮುಂಜಾನೆ ೭-೩೦ ಗಂಟೆಗೆ ಬೇವಿನಹಳ್ಳಿ ಗ್ರಾಮದಿಂದ ಕಾರ್ ಮುಖಾಂತರ ಹೊರಟು ಶಿಗ್ಗಾಂವಿ ಮೂಲಕ ಬೆಳಗಾವಿ ಜಿಲ್ಲೆ ನಂದಗಡ ಗ್ರಾಮದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಹನುಮರಹಳ್ಳಿ ಗ್ರಾಮದ ಹತ್ತಿರ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಕಾರು ನಿಯಂತ್ರಣ ತಪ್ಪಿ ಬೇವಿನಮರಕ್ಕೆ ಡಿಕ್ಕಿ ಹೊಡೆದಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ, ಎಎಸ್‌ಪಿ ಸಿ. ಗೋಪಾಲ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.