ಕಾರು ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

| Published : Jun 19 2024, 01:13 AM IST

ಸಾರಾಂಶ

, ತಾಲೂಕಿನಲ್ಲಿ ಜೆಜೆಎಂ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿಯೇ ದೊಡ್ಡಗಾತ್ರದ ಮಣ್ಣನ್ನು ತೆಗೆದು ಹಾಕಿರುವುದರಿಂದಲೇ ಈ ಅಪಘಾತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಿತ್ತೂರು, ಹಾಡ್ಯ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆ.ಆರ್. ನಗರ ತಾಲೂಕಿನ ಅಂಕನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ಮೃತ್ಯುಂಜಯ (33) ಮೃತಪಟ್ಟವರು.

ಬೆಟ್ಟದಪುರ ಹೋಬಳಿಯ ವಡ್ಡರೆ ಹೊಸಹಳ್ಳಿ ಗ್ರಾಮದಲ್ಲಿ ಶುಂಠಿಗೆಂದು ಜಮೀನು ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು, ಜಮೀನು ಬಳಿ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರುವಾಗ ಕೆ.ಆರ್. ನಗರ ಬೆಟ್ಟದಪುರ ಮುಖ್ಯ ರಸ್ತೆಯ ಹಾಡ್ಯ ಗೇಟ್ ಬಳಿ ಬೈಕ್ , ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತ್ಯುಂಜಯ ಸಾವಿಗೀಡಾಗಿದ್ದಾರೆ ಎಂದು ಮೃತರ ಪತ್ನಿ ಶಾಂಭವಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಶವವನ್ನು ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.

ಕೆ.ಆರ್. ನಗರ ಶಾಸಕ ಡಿ. ರವಿಶಂಕರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಇತರರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಕೂಲಿ ಕಾರ್ಮಿಕ ಸಂಘದವರಿಂದ ಪ್ರತಿಭಟನೆ:

ಕೂಲಿ ಕಾರ್ಮಿಕ ಸಂಘ ಹಾಗೂ ಕೃಷಿ ಶುಂಠಿ ಮಾರಾಟ ಸಂಘದ ಪದಾಧಿಕಾರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲಿ ಮಣ್ಣು ಇದ್ದರಿಂದಲೇ ಈ ಸಮಸ್ಯೆ ಆಗಿದೆ ಎಂದು ಆರೋಪಿಸಿದರು.

ಶುಂಠಿ ಮಾರಾಟಗಾರ ಸಂಘದ ಪದಾಧಿಕಾರಿ ಮಂಜುನಾಥ್ ಕೋಮಲಾಪುರ ಮಾತನಾಡಿ, ತಾಲೂಕಿನಲ್ಲಿ ಜೆಜೆಎಂ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿಯೇ ದೊಡ್ಡಗಾತ್ರದ ಮಣ್ಣನ್ನು ತೆಗೆದು ಹಾಕಿರುವುದರಿಂದಲೇ ಈ ಅಪಘಾತ ಸಂಭವಿಸಿದೆ. ಕಾಮಗಾರಿ ಮುಗಿದ ನಂತರವೂ ಮಣ್ಣು ರಸ್ತೆಯಲ್ಲೇ ಬಿಟ್ಟಿರುವುದು ಈ ಅವಘಡಕ್ಕೆ ಕಾರಣವಾಗಿದೆ, ಮೃತ ವ್ಯಕ್ತಿಗೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಸರ್ಕಾರದ ವತಿಯಿಂದ ತಕ್ಷಣದಲ್ಲಿಯೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಕೂಲಿ ಕಾರ್ಮಿಕ ಸಂಘದ ಪದಾಧಿಕಾರಿ ಶರೀಫ್ ಮಾತನಾಡಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮೃತರ ಕುಟುಂಬ ಅನಾಥವಾಗಿದೆ, ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು, ಇಲ್ಲವಾದರೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಆಗಮಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಈಚೂರು ನಾಗೇಶ್, ಭುವನಹಳ್ಳಿ ಲೋಕೇಶ್, ವೇದಾಂತ್, ಅಬ್ದುಲ್ ಮಾಲಿಕ್, ನಂದ, ಕಲಿದ್ ಪಾಷಾ, ಮಹೇಶ ಮಂಜು, ಸುರೇಶ್, ಮಹದೇವ್ ಇದ್ದರು.