ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

| Published : Jan 16 2025, 12:45 AM IST

ಸಾರಾಂಶ

ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ನೋಂದಣಿಯಾಗದ ಕಾರೊಂದು ಏಕಾಏಕಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಉಸ್ಮಾನ್‌ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಪುತ್ತೂರು: ಕಾರೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಭವಿಸಿದೆ.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್‌ ನಿವಾಸಿ ಅಬ್ಬಾಸ್‌ ಎಂಬವರ ಪುತ್ರ ಉಸ್ಮಾನ್‌ (24) ಮೃತಪಟ್ಟ ಯುವಕ. ವೃತ್ತಿಯಲ್ಲಿ ಪೈಂಟರ್‌ ಆಗಿರುವ ಉಸ್ಮಾನ್‌ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಸತ್ತಿಕಲ್ಲು ಎಂಬಲ್ಲಿ ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ನೋಂದಣಿಯಾಗದ ಕಾರೊಂದು ಏಕಾಏಕಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಉಸ್ಮಾನ್‌ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಾರು ಮತ್ತು ಸ್ಕೂಟರ್‌ ರಸ್ತೆ ಬದಿ ಚರಂಡಿಗೆ ಬಿದ್ದಿವೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಸೈಬರ್ ವಂಚನೆ: ಇಬ್ಬರು ಆರೋಪಿಗಳ ಸೆರೆ

ಮಂಗಳೂರು: ನಗರ ಸೆನ್್‌ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ಭಾಗಿಯಾದ ಕೇರಳ ರಾಜ್ಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ಉಮ್ಮರ್ ವಲಿಯ ಪರಂಬತ್ ( 41) ಹಾಗೂ ಕಣ್ಣೂರು ಜಿಲ್ಲೆಯ ರಿಯಾಸ್ ಎಂ.ವಿ. (45) ಬಂಧಿತರು.ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ತಿಳಿಸಿ ದೂರುದಾರರಿಂದ ಹಂತ ಹಂತವಾಗಿ ಒಟ್ಟು 77,96,322.08 ರು. ಪಡೆದು ವಂಚನೆ ಮಾಡಿದ್ದರು.ಪೊಲೀಸರು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ 26,27,114.4 ರು. ವರ್ಗಾವಣೆಯಾಗಿದ್ದು, ಈ ಬ್ಯಾಂಕ್ ಖಾತೆಯಿಂದ ಕೇರಳ ಮೂಲದ ಉಮ್ಮರ್ ವಲಿಯ ಪರಂಬತ್‌ನ ಬ್ಯಾಂಕ್ ಖಾತೆಗೆ 6,00,000 ರು. ಹಣ ಬಂದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ಮುಂದುವರಿಸಿದಾಗ ರಿಯಾಸ್ ಎಂ.ವಿ. ಎಂಬಾತ ಹಣವನ್ನು ವರ್ಗಾವಣೆ ಮಾಡಿಸಿದ್ದು, ಹಣ ವಿಥ್ ಡ್ರಾ ಮಾಡಿಕೊಟ್ಟಲ್ಲಿ ಕಮಿಷನ್ ನೀಡುವುದಾಗಿ ತಿಳಿಸಿ 6,00,000 ಲಕ್ಷ ರು. ವಿಥ್ ಡ್ರಾ ಮಾಡಿಕೊಂಡಿಸಿದ್ದ.

ಸೆನ್ ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸತೀಶ್ ಎಂ.ಪಿ ಮತ್ತು ಪೊಲೀಸ್ ಉಪ ನಿರೀಕ್ಷಕ ಗುರಪ್ಪ ಕಾಂತಿ ನೇತೃತ್ವದಲ್ಲಿ ಪ್ರಕರಣದ ಇನ್ನುಳಿದ ಆರೋಪಿತಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.