ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ದೇವರ ದರ್ಶನಕ್ಕೆ ಹೋಗಿ ಮರಳಿ ಮನೆಗೆ ಹೋಗುವಾಗ ಲಾರಿ-ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ- ಮುದ್ದೇಬಿಹಾಳ ರಸ್ತೆಯ ಧನ್ನೂರ ಟೋಲ್ ನಾಕಾ ಸಮೀಪದಲ್ಲಿ ಗುರುವಾರ ನಡೆದಿದೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಲಕ್ಷ್ಮಣ ವಡ್ಡರ (55), ಬೈಲಪ್ಪ ಬಿರಾದಾರ (46), ಕಾರು ಚಾಲಕ ಮಹ್ಮದರಫೀಕ ಮುಲ್ಲಾ (23), ರಾಮಣ್ಣ ನಾಯಕಮಕ್ಕಳ (57) ಮೃತಪಟ್ಟವರು. ಹೊಸಪೇಟೆ ಹತ್ತಿರದ ಹುಲಿಗೆಮ್ಮನ ದೇವಸ್ಥಾನದ ದರ್ಶನ ಮುಗಿಸಿಕೊಂಡು ವಾಪಸ್ ಮುದ್ದೇಬಿಹಾಳ ಬರುವಾಗ ಈ ದುರ್ಘಟನೆ ಸಂಭವಿಸಿದೆ.ಗುರುವಾರ ಬೆಳಗಿನ ಜಾವ 2-3 ಗಂಟೆ ಸುಮಾರಿಗೆ ಹುನಗುಂದ ಕಡೆಯಿಂದ ಮುದ್ದೇಬಿಹಾಳ ಕಡೆಗೆ ಅತೀ ವೇಗವಾಗಿ ಕಾರು ಚಲಾಯಿಸಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕೆ ಹೊಡೆದಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹುನಗುಂದ ಸಿಪಿಐ ಸುನೀಲ ಸವದಿ, ಪಿಎಸ್‌ಐ ಪ್ರಕಾಶ.ಡಿ ಭೇಟಿ ಪರೀಶೀಲನೆ ನಡೆಸಿದರು. ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:ಕಾರು ಇನ್ನು 20 ನಿಮಿಷ ಕ್ರಮಿಸಿದ್ದರೆ ಮುದ್ದೇಬಿಹಾಳದ ತಮ್ಮ ಮನೆ ಸೇರುತ್ತಿದ್ದರು. ಮೃತ ವ್ಯಕ್ತಿಗಳ ಸಂಬಂಧಿಕರು ಮತ್ತು ಕುಟುಂಬಸ್ಥರು ಬೆಳಗ್ಗೆ ಗುಂಪು ಗುಂಪಾಗಿ ಆಗಮಿಸಿ ಶವಾಗಾರದ ರಸ್ತೆ ಬದಿಯಲ್ಲಿ ಕುಳಿತು ರೋಧಿಸುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿದ್ದವು.
ಹುಲಿಗೆಮ್ಮನ ದರ್ಶನ ಮಾಡಿಕೊಂಡರು ಬಂದರು. ದೇವರು ನಮ್ಮ ದೊಡ್ಡಪ್ಪನ ಕಾಪಾಡಲಿಲ್ಲ ಎಂದು ಮೃತ ವ್ಯಕ್ತಿ ಲಕ್ಷ್ಮಣ ಅವರ ತಮ್ಮನ ಮಗ ಶಿವಾನಂದ ವಡ್ಡರ ನೋವು ವ್ಯಕ್ತಪಡಿಸಿದರು.