ಸಾರಾಂಶ
ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ರಿಟ್ಜ್ ಕಾರು ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ನಿವಾಸಿ ಹರೀಶ್ ಎಂಬವರ ಪತ್ನಿ ತಿಲಕ (40) ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ , ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್ ಹಾಗೂ ದಿಶಾನಿ ಅವರು ಗಾಯಗೊಂಡಿದ್ದಾರೆ.
ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ರಿಕ್ಷಾದಲ್ಲಿ ಮಕ್ಕಳು ಸಹಿತ ಎಂಟು ಮಂದಿಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ರಿಟ್ಜ್ ಕಾರು ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ನಿವಾಸಿ ಹರೀಶ್ ಎಂಬವರ ಪತ್ನಿ ತಿಲಕ (40) ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ , ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್ ಹಾಗೂ ದಿಶಾನಿ ಅವರು ಗಾಯಗೊಂಡಿದ್ದಾರೆ. ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಸು ಮನೆಗೆ ಬರುತ್ತಿರುವ ಸಮಯ ಬಾಂಬಿಲದಲ್ಲಿ ಅಪಘಾತ ಸಂಭವಿಸಿದೆ. ತಿಲಕ ಮತ್ತು ಸಂಬಂಧಿಕರು ಪಂಜಿಕಲ್ಲುವಿನಿಂದ ರಿಕ್ಷಾ ಬಾಡಿಗೆ ಮಾಡಿಕೊಂಡು ಸೀಮಂತ ಕಾರ್ಯಕ್ರಮಕ್ಕೆ ಹೋಗಿದ್ದರು.ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಳಿ ವಿಚಾರಿಸಿದ್ದಾರೆ. ಬಳಿಕ ಅಪಘಾತದಲ್ಲಿ ಮೃತರಾದ ತಿಲಕ ಅವರ ಮೃತದೇಹ ಇರಿಸಲಾದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಂಜಿಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್ ದಾಸ ಪೂಜಾರಿ, ಪ್ರವೀಣ್, ಕರುಣೇಂದ್ರ ಪೂಜಾರಿ, ಪ್ರಕಾಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು. ಘಟನೆಯ ಕುರಿತು ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.