ಆಗಸ್ಟ್ 31ರಂದು ಶಿಗ್ಗಾಂವಿಯಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

| Published : Aug 29 2024, 12:55 AM IST

ಸಾರಾಂಶ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಆ. ೩೧ರಂದು ಬೆಳಗ್ಗೆ ೧೦ ಗಂಟೆಗೆ ಶಿಗ್ಗಾಂವಿಯ ಪಕ್ಷದ ಕಚೇರಿಯಲ್ಲಿ (ಬಸವೇಶ್ವರ ಆಟೋಮೊಬೈಲ್ಸ್‌ ಮೇಲೆ) ಯುವಜನರಿಗಾಗಿ ಉದ್ಯೋಗ, ವೃತ್ತಿ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ.

ಶಿಗ್ಗಾಂವಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಆ. ೩೧ರಂದು ಬೆಳಗ್ಗೆ ೧೦ ಗಂಟೆಗೆ ಶಿಗ್ಗಾಂವಿಯ ಪಕ್ಷದ ಕಚೇರಿಯಲ್ಲಿ (ಬಸವೇಶ್ವರ ಆಟೋಮೊಬೈಲ್ಸ್‌ ಮೇಲೆ) ಯುವಜನರಿಗಾಗಿ ಉದ್ಯೋಗ, ವೃತ್ತಿ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಪಕ್ಷದ ಮುಖಂಡರು, ಶಿಬಿರದ ಉದ್ದೇಶ ವಿವರಿಸಿದರು.

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಇದರಿಂದ ಬಹಷ್ಟು ಯುವಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರ ಕಣ್ಣಿಗೆ ಮಣ್ಣೆರಚಲು ಕೌಶಲ್ಯ ಅಭಿವೃದ್ಧಿ ಮಾಡಲಾಗುವುದು ಎಂದು ಅಥವಾ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದು, ಹಲವಾರು ವರ್ಷಗಳಿಂದ ನೇಮಕಾತಿ ಮಾಡದೆ ಯುವಜನರು ವಯೋಮಿತಿ ಮೀರಿ ತಮ್ಮ ವಿದ್ಯಾರ್ಹತೆಗೆ ಮತ್ತು ಕೌಶಲ್ಯಕ್ಕೆ ಅರ್ಹವಲ್ಲದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಆಗೊಮ್ಮೆ ಈಗೊಮ್ಮೆ ನಡೆಯುವ ಸರ್ಕಾರಿ ನೇಮಕಾತಿ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದ್ದು, ಅರ್ಹ ಮತ್ತು ಬಡ ಯುವಜನರಿಗೆ ಸರ್ಕಾರಿ ಉದ್ಯೋಗ ದೊರೆಯುವುದು ದುಸ್ತರವಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಮತ್ತು ಬ್ಯಾಂಕ್‌ಗಳ ನೇಮಕಾತಿಗಳಲ್ಲಿ ಬಹುತೇಕ ಹೊರ ರಾಜ್ಯದವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇನ್ನು ರಾಜ್ಯದಲ್ಲಿನ ಖಾಸಗಿ ಕಂಪನಿಗಳು ಕರ್ನಾಟಕದ ಯಾವಜನರನ್ನು ಕಡೆಗಣಿಸಿ, ಹೊರ ರಾಜ್ಯದವರಿಗೆ ಮಣೆ ಹಾಕುತ್ತಿವೆ. ನಿರುದ್ಯೋಗ ಸಮಸ್ಯೆ ಸಾಮಾಜಿಕ ಕ್ಷೋಭೆಗೆ ಕಾರಣವಾಗಿದೆ ಎಂದು ಪಕ್ಷ ಹೇಳಿದೆ.

ರಾಜ್ಯದ ಯುವಜನರಿಗೆ, ಅದರಲ್ಲೂ ಬಡ ಯುವಜನರಿಗೆ ಸೂಕ್ತ ಸಮಯದಲ್ಲಿ ಅವರ ಇಷ್ಟದ ನೌಕರಿ ಪಡೆಯಲು ಯಾವ ರೀತಿಯ ಶಿಕ್ಷಣ ಪಡೆಯಬೇಕು? ಹೇಗೆ ತಯಾರಿ ಮಾಡಿಕೊಳ್ಳಬೇಕು? ಎಂದು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷವು ಎಲ್ಲ ಸರ್ಕಾರಿ ನೌಕರಿಗಳನ್ನು ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಪ್ರೌಢಶಾಲೆಯ ಹಂತದಿಂದಲೇ ಮಕ್ಕಳಿಗೆ ಹಂತ ಹಂತವಾಗಿ ವೃತ್ತಿ ಮಾರ್ಗದರ್ಶನ ನೀಡುವುದನ್ನು ಕಡ್ಡಾಯವಾಗಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.

ಆದ್ದರಿಂದ ಕೆಆರ್ಎಸ್ ಪಕ್ಷ ವೃತ್ತಿ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸುತ್ತಿದೆ. ಶಿಬಿರದಲ್ಲಿ ತುಮಕೂರಿನ ಸಿಜ್ಞಾ ಯುವ ಕೇಂದ್ರದ ನಿರ್ದೇಶಕ ಜ್ಞಾನಸಿಂಧು ಸ್ವಾಮಿ ಮತ್ತು ಬೆಂಗಳೂರಿನ ಆಜಾದ್ ಇನ್‌ಸ್ಟಿಟ್ಯೂಟ್‌ನ ಶ್ರೀನಿವಾಸ್ ಮಾರ್ಗದರ್ಶನ ಮಾಡಲಿದ್ದಾರೆ.

ಪಿಯುಸಿ/ ಪದವಿ ಓದುತ್ತಿರುವವರು, ಓದು ಮುಗಿಸಿ ಅಥವಾ ೧೦ನೇ ತರಗತಿ ಮೇಲ್ಪಟ್ಟು ಅನುತ್ತೀರ್ಣರಾಗಿ ಉದ್ಯೋಗ ನಿರೀಕ್ಷೆಯಲ್ಲಿರುವವರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೭೩೩೮೧೪೩೭೧೧/ ೯೬೬೩೯೮೭೦೮೧/ ೯೦೬೬೬೦೨೨೯೦ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕೆಆರ್‌ಎಸ್‌ ಪಕ್ಷದ ತಾಲೂಕು ಅಧ್ಯಕ್ಷ ಈರಣ್ಣ ಬಾರಕೇರ ಕೋರಿದ್ದಾರೆ.